ಗೋಣಿಕೊಪ್ಪಲು, ಅ. 11: ಮನೆಯೆ ಮೊದಲ ಪಾಠ ಶಾಲೆ ಎಂಬ ನಾಣ್ನುಡಿಯಂತೆ ಇಂದಿನ ಮಕ್ಕಳಿಗೆ ಜೀವನ ಮೌಲ್ಯಗಳು ಹಾಗೂ ನೈತಿಕ ಮೌಲ್ಯಗಳ ಬಗ್ಗೆ ತಾಯಿಯು ತಿಳಿಹೇಳಬೇಕು. ನಮ್ಮ ಪೂರ್ವಜರ ಆಚಾರ ವಿಚಾರಗಳನ್ನು ಪಾಲಿಸುತ್ತಾ ಸಂಸ್ಕೃತಿ, ಪದ್ಧತಿ,ಪರಂಪರೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಭಾರತದ ಭವ್ಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತಾಯಿಯ ಪಾತ್ರ ಮಹತ್ವದ್ದು. ದುಡಿಯುವ ಮಹಿಳೆ ‘ಅಹಂ’ ಬಿಟ್ಟು ಸಂಸ್ಕೃತಿ-ಸಂಸ್ಕಾರದ ಪೆÇೀಷಕರಾಗಬೇಕು ಎಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಟಿ.ಸಿ.ಗೀತಾನಾಯ್ಡು ವಿವರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ವೀರಾಜಪೇಟೆ-ಮಡಿಕೇರಿ ಘಟಕ ಮತ್ತು ಅಮ್ಮತ್ತಿ ವಲಯ ಕಣ್ಣಂಗಾಲ ಕಾರ್ಯಕ್ಷೇತ್ರದ ‘ಭೂಮಿ’ ಜ್ಞಾನ ವಿಕಾಸ ಕೇಂದ್ರ ಇವರ ವತಿಯಿಂದ ಭಾನುವಾರ ಕಣ್ಣಂಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ‘ಸಂಸ್ಕೃತಿ ಮತ್ತು ಸಂಸ್ಕಾರ’ ಮಹಿಳಾ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಸ್ಕಾರ ಮತ್ತು ಸಂಸ್ಕೃತಿ ಇವುಗಳ ರಕ್ಷಣೆ ಸುಶಿಕ್ಷಿತ ಸಮಾಜದಿಂದ ಮಾತ್ರ ಸಾಧ್ಯ. ಆದ್ದರಿಂದ ಮಹಿಳೆಯರು ಅಕ್ಷರಸ್ಥರಾಗುವದರೊಂದಿಗೆ. ಸುತ್ತಮುತ್ತಲಿನವರಲ್ಲಿಯೂ ಶಿಕ್ಷಣ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವದಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಿದ್ದಲ್ಲಿ ನಮ್ಮ ಸಂಸ್ಕೃತಿ ರಕ್ಷಣೆ ಸಾಧ್ಯ ಎಂದು ಗೀತಾ ನಾಯ್ಡು ವಿವರಿಸಿದರು. ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆಯಲ್ಲದೆ, ಗ್ರಂಥಾಲಯ ಅತ್ಯಧಿಕವಾಗಿ ಬಳಕೆ ಮಾಡಿದ ಸಲ್ಮಾ, ಶೇ.100 ಹಾಜರಾತಿ ಹೊಂದಿದ್ದ ಚೋಂದಮ್ಮ ಹಾಗೂ 60 ವರ್ಷ ವಯೋಮಿತಿಯ ಕೇಂದ್ರ ಕ್ರಿಯಾಶೀಲ ಸದಸ್ಯೆ ಅಮ್ಮಮ್ಮ ಅವರನ್ನು ಇದೇ ಸಂದರ್ಭ ಗುರುತಿಸಲಾಯಿತು.
ಕಣ್ಣಂಗಾಲ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಜಯಂತಿ, ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ರುಕ್ಮಿಣಿ, ಜಯ, ಒಕ್ಕೂಟದ ಜತೆ ಕಾರ್ಯದರ್ಶಿ ಬಿ.ಎ. ಶಾಂತಿ ಉಪಸ್ಥಿತರಿದ್ದರು. ನಿರೂಪಣೆ ಪ್ರೇಮಾ, ಪ್ರಾರ್ಥನೆ ರುಕ್ಮಿಣಿ, ಸ್ವಾಗತ ರಶ್ಮಿ, ವರದಿ ಸೇವಾಪ್ರತಿನಿಧಿ ರಾಧಾ ಹಾಗೂ ಚೋಂದಮ್ಮ ವಂದಿಸಿದರು.