ವೀರಾಜಪೇಟೆ, ಅ. 11: ಕಾಲೇಜು ವಿದ್ಯಾರ್ಥಿಗಳು ಪರಸ್ಪರ ಕಾದಾಡಿಕೊಂಡು ವಿದ್ಯಾರ್ಥಿಯೋರ್ವನ ತಲೆಗೆ ಮಾರಣಾಂತಿಕ ಗಾಯವಾದ ಘಟನೆ ವೀರಾಜಪೇಟೆ ನಗರದ ಛತ್ರಕೆರೆಯ ಬಳಿ ನಡೆದಿದೆ.

ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳಾದ ಗಗನ್ ಮತ್ತು ತಿಲಕ್ ಗಾಯಾಳುಗಳು. ಕಾಲೇಜು ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಕಾಲೇಜಿನ ಅವರಣದೂಳಗೆ ಹೊಗೆಯಾಡಿಕೊಂಡಿದ್ದ ಕ್ಷುಲ್ಲಕ ಕಾರಣವು ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾಗುವ ಮಟ್ಟಕ್ಕೆ ಬಂದಿತ್ತು. ಕುಪಿತಗೊಂಡ ವಿದ್ಯಾರ್ಥಿ ಕ್ಷಣಮಾತ್ರದಲ್ಲಿ ಮರದ ಬಡಿಗೆಯಿಂದ ಗಗನ್ ಎಂಬ ವಿದ್ಯಾರ್ಥಿಯ ತಲೆಯ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ತಲೆಯಿಂದ ರಕ್ತ ಶ್ರಾವವಾಗಿದೆ. ಜಗಳ ಬಿಡಿಸಲು ಮಧ್ಯ ಪ್ರವೇಶ ಮಾಡಿದ ತಿಲಕ್ ಎಂಬ ವಿದ್ಯಾರ್ಥಿಯ ಎದೆಗೆ ಪೆಟ್ಟು ಬಿದ್ದಿದೆ. ಗಾಯಾಳುಗಳನ್ನು ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಶಶಾಂಕ್, ಸಂತೋಷ್, ದಿಲನ್, ಪವನ್, ರಂಜನ್ ಇವರುಗಳು ಮತ್ತು ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ ಗಗನ್ ಮತ್ತು ತಿಲಕ್ ಎಂಬ ವಿದ್ಯಾರ್ಥಿಗಳ ನಡುವೆ ಗುಂಪು ಘರ್ಷಣೆಗಳು ಅಗಿಂದಾಗ್ಗೆ ಕಾಲೇಜಿನ ಆವರಣದಲ್ಲಿ ನಡೆಯುತಿತ್ತು ಎಂದು ಕಾಲೇಜಿನ ಮೂಲಗಳಿಂದ ತಿಳಿದುಬಂದಿದೆ. ಹಲವು ಬಾರಿ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದರೂ ವಿದ್ಯಾರ್ಥಿಗಳು ಗಣನೆಗೆ ತೆಗೆದುಕೊಂಡಿರುವದಿಲ್ಲ. ಇದೀಗ ಗಾಯಾಳು ಗಗನ್ ನೀಡಿರುವ ದೂರನ್ನು ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಅಂತಿಮ ಬಿ.ಕಾಂ ವಿದ್ಯಾರ್ಥಿಗಳ ಮೇಲೆ ಗುಂಪು ಘರ್ಷಣೆ ಪ್ರಕರಣ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. -ಕೆ.ಕೆ.ಎಸ್