ಸೋಮವಾರಪೇಟೆ, ಅ. 11: ಮಹಾಮಳೆ, ಜಲಸ್ಫೋಟ, ಪ್ರವಾಹದಿಂದ ಈಗಷ್ಟೇ ಜಿಲ್ಲೆ ಸುಧಾರಿಸಿಕೊಳ್ಳುತ್ತಿದೆ. ಸಂಪರ್ಕ ಸಾಧನಗಳಾಗಿದ್ದ ಲೋಕೋಪಯೋಗಿ ಇಲಾಖಾ ರಸ್ತೆಗಳು ಹಲವೆಡೆಗಳಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೆ ಸಂಪರ್ಕ ಕಲ್ಪಿಸಲು ಇಲಾಖೆ ಹರಸಾಹಸ ಮಾಡುತ್ತಿದೆ. ರಾಜ್ಯಹೆದ್ದಾರಿಗಳಲ್ಲಿ ಕಾಮಗಾರಿ ನಡೆಯುತ್ತಿರುವದು ಸಮಾಧಾನಕರವಾಗಿದ್ದರೂ, ಗ್ರಾಮೀಣ ಪ್ರದೇಶಗಳ ರಸ್ತೆಗಳ ದುಸ್ಥಿತಿಯತ್ತಲೂ ಇಲಾಖೆಗಳು ಗಮನಹರಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.

ಮುಂಗಾರಿನ ಮಹಾಮಳೆಗೆ ಸೋಮವಾರಪೇಟೆ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇದೀಗ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗವಾಗಲಿ ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳೂ ಒಳಗೊಂಡಂತೆ ಶಾಂತಳ್ಳಿ, ಬಾಚಳ್ಳಿ, ಕುಮಾರಳ್ಳಿ, ಮಲ್ಲಳ್ಳಿ ಜಲಪಾತ ರಸ್ತೆ ಗುಂಡಿಮಯವಾಗಿದ್ದು, ವಾಹನ ಚಾಲಕರು ಸರ್ಕಸ್ ಮಾಡಬೇಕಾಗಿದೆ. ಕುಮಾರಳ್ಳಿ ಬಾಚಳ್ಳಿಯಿಂದ ಬೀದಳ್ಳಿವರೆಗಿನ ರಸ್ತೆ ದುರಸ್ತಿಗೀಡಾಗಿ ವರ್ಷ ಕಳೆದಿದೆ. ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಇದೇ ರಸ್ತೆ ಮೂಲಕ ತೆರಳಬೇಕಿದ್ದು, ಹೊಂಡಾಗುಂಡಿಯ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಇದರೊಂದಿಗೆ ಕೋಟೆಯೂರು ಹಾಗು ಬಸವನಕೊಪ್ಪ ರಸ್ತೆ, ಕೂಗೇಕೋಡಿ, ಸುಳಿಮಳ್ತೆ, ದೊಡ್ಡಮಳ್ತೆ, ಶುಂಠಿ, ಚನ್ನಾಪುರ, ಹಿರಿಕರ, ಕೂಗೂರು, ಚಿಕ್ಕಾರ, ಹಾರಳ್ಳಿ ಸುತ್ತಮುತ್ತಲ ಗ್ರಾಮಗಳ ರಸ್ತೆ, ಹೊನವಳ್ಳಿ-ಹೊನ್ನಮ್ಮನ ಕೆರೆ ರಸ್ತೆ, ಬೀಟ್ಟಿಕಟ್ಟೆ-ಚನ್ನಾಪುರ ರಸ್ತೆ, ಹೆಗ್ಗಳ- ಕೂಗೂರು ರಸ್ತೆ, ಆನೆಕೆರೆ-ಕಿಬ್ಬೆಟ್ಟ ರಸ್ತೆ, ಚಿಕ್ಕತೋಳೂರು ರಸ್ತೆ-ದೊಡ್ಡತೋಳೂರು ಸಂಪರ್ಕ ರಸ್ತೆ, ತೋಳೂರುಶೆಟ್ಟಳ್ಳಿ-ಸಬ್ಬಮ್ಮ ದೇವರ ಸುಗ್ಗಿಕಟ್ಟೆ ರಸ್ತೆ, ಯಡೂರು ಪರಿಶಿಷ್ಟ ಜಾತಿ ಕಾಲನಿ ರಸ್ತೆ, ಕೂತಿ-ಹೊಸೂರು ಸಂಪರ್ಕ ರಸ್ತೆ, ಚನ್ನಬಸಪ್ಪ ಹಾಲ್‍ನಿಂದ ಚೌಡ್ಲು, ಸಾಂದೀಪನಿ ಶಾಲೆ ರಸ್ತೆ, ಐಗೂರು-ಕಿರಗಂದೂರು ರಸ್ತೆ, ಅಬ್ಬೂರುಕಟ್ಟೆ-ಹೊಸಳ್ಳಿ, ಕಣಿವೆ ಸಂಪರ್ಕ ರಸ್ತೆ, ಕುಂಬೂರು, ಬಿಳಿಗೇರಿ, ನಂದಿಮೊಟ್ಟೆ ರಸ್ತೆ ಗುಂಡಿಮಯವಾಗಿದೆ. ಹಾನಗಲ್ಲು-ದುದ್ದುಗಲ್ಲು-ತಾಕೇರಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತಗೊಂಡು ಕಳೆದ 50 ದಿನಗಳಿಂದ ವಾಹನ ಸಂಚಾರ ಸ್ತಬ್ಧಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಗರಳ್ಳಿ, ಕೂತಿ ಗ್ರಾಮದ ಸಂಪರ್ಕ ರಸ್ತೆ ಕುಸಿದಿದೆ. ಕುಂದಳ್ಳಿ-ಪಟ್ಲ-ಮಾಗೇರಿ ರಸ್ತೆ ಕುಸಿದು 2 ತಿಂಗಳಾಗುತ್ತಾ ಬಂದರೂ ಇಂದಿಗೂ ಕಾಮಗಾರಿ ಪ್ರಾರಂಭವಾಗಿಲ್ಲ.

ಭೂಕುಸಿತದಿಂದ ಹಾನಿಯಾಗಿರುವ ಸೋಮವಾರಪೇಟೆ, ಮಾದಾಪುರ, ಹಟ್ಟಿಹೊಳೆ, ಹಾಲೇರಿ, ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೆಲಸ ನಡೆಯುತ್ತಿದ್ದು, ಈಗಾಗಲೇ ಲಘು ವಾಹನಗಳ ಸಂಚಾರ ಪ್ರಾರಂಭವಾಗಿದೆ. ಭೂಕುಸಿತಕ್ಕೆ ಒಳಗಾದ ರಸ್ತೆಗಳಲ್ಲಿ ಮಾತ್ರ ಕಾಮಗಾರಿ ಪ್ರಾರಂಭವಾಗಿದ್ದರೆ, ಮಳೆಯಿಂದ ದುರಸ್ತಿಗೀಡಾಗಿರುವ ಗ್ರಾಮೀಣ ಪ್ರದೇಶದ ರಸ್ತೆಗಳು, ಜಿ.ಪಂ. ರಸ್ತೆಗಳಲ್ಲಿ ಯಾವದೇ ಕಾಮಗಾರಿ ಪ್ರಾರಂಭವಾಗಿಲ್ಲ. ಇದೀಗ ರಾಜ್ಯ ಹಾಗು ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ಆದರೆ ರಸ್ತೆಯ ಗುಂಡಿಗಳಿಗೆ ಮುಕ್ತಿ ನೀಡುವ ಕಾಮಗಾರಿ ಮಾತ್ರ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಲ್ಲಿ ಗುರುತಿಸಲಾದ ಬಹುತೇಕ ರಸ್ತೆಗಳ ಕಾಮಗಾರಿ ನಡೆದಿಲ್ಲ. ‘ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ; ನಾವು ಹೇಗೆ ಕೆಲಸ ಮಾಡುವದು?’ ಎಂದು ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್‍ನಲ್ಲಿ ನಿರ್ವಹಿಸಿದ ರಸ್ತೆ ಕೆಲಸಕ್ಕೆ ಹಣ ನೀಡಿಲ್ಲ. ನೂತನ ಕಾಮಗಾರಿ ಕೈಗೆತ್ತಿಕೊಳ್ಳುವದಾದರೂ ಹೇಗೆ? ಎಂಬ ಪ್ರಶ್ನೆ ಗುತ್ತಿಗೆದಾರರಿಂದ ಕೇಳಿಬರುತ್ತಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ವಾರ್ಷಿಕ ರಸ್ತೆ ನಿರ್ವಹಣೆ ಆಗಸ್ಟ್ ತಿಂಗಳಲ್ಲೇ ಮಾಡಬೇಕಿತ್ತು. ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಅನುದಾನ ಬರಲಿಲ್ಲ. ಬಾಕಿಯಿರುವ ಬಿಲ್ ಪಾವತಿಗಾಗಿ ಗುತ್ತಿಗೆದಾರರು 10 ದಿನಗಳ ಕಾಲ ಪ್ರತಿಭಟನೆ ಮಾಡಿದರು. ನಂತರ ಮಳೆ ಪ್ರಾರಂಭವಾಯಿತು. ಇವೆಲ್ಲಾ ಕಾರಣದಿಂದ ರಾಜ್ಯ ಹೆದ್ದಾರಿ ನಿರ್ವಹಣೆ ಕಾರ್ಯ ನಡೆಯಲಿಲ್ಲ. ಇದೀಗ ರಸ್ತೆ ನಿರ್ವಹಣೆಗೆ 1.10ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಮಳೆಹಾನಿ ಪರಿಹಾರದ ನಿಧಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದು ತಿಳಿಸಿದ್ದಾರೆ.

ಒಟ್ಟಾರೆ ಭೂಕುಸಿತಕ್ಕೆ ಒಳಗಾದ ಸ್ಥಳಗಳಲ್ಲಿ ಮಾತ್ರ ಸದ್ಯ ಕಾಮಗಾರಿ ನಡೆಯುತ್ತಿದ್ದು, ಕಳೆದ ಸಾಲಿನ ವಿಶೇಷ ಪ್ಯಾಕೇಜ್‍ನಲ್ಲಿ ಗುರುತಿಸಲಾದ ರಸ್ತೆಗಳು ಹಾಗೆಯೇ ಉಳಿದಿವೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ 4 ಕ್ಕಿಂತ ಅಧಿಕ ರಸ್ತೆಗಳು ದುಸ್ಥಿತಿಯಲ್ಲಿವೆ. ಈ ಬಗ್ಗೆ ಸಂಬಂಧಿಸಿದ ಅಭಿಯಂತರರು, ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ಗಮನ ಹರಿಸಿ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಕ್ರಮವಹಿಸಬೇಕಾಗಿದೆ.

- ವಿಜಯ್