ಮಡಿಕೇರಿ, ಅ. 11: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ತುತ್ತಾಗಿರುವ ನಗರ ಪ್ರದೇಶದ ಸಂತ್ರಸ್ತ ಕುಟುಂಬ ದವರಿಗೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ. ನಗರಸಭೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನ ರಹಿತರು ಮತ್ತು ಮನೆ ಕಳೆದುಕೊಂಡವರ ಪಟ್ಟಿ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಎಂ.ಎಲ್. ರಮೇಶ್ ಪ್ರಕೃತಿ ವಿಕೋಪದಿಂದಾಗಿ ಸುಮಾರು 175 ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಇವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಮಾಹಿತಿ ನೀಡಿದರು. ನಗರೋತ್ಥಾನ ಮೂರನೇ ಹಂತದಲ್ಲಿ ಆರಂಭವಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ನಗರ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಸ್ಥಳದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರು.

ಈಗಾಗಲೇ ನಗರಸಭೆಗೆ ಬಿಡುಗಡೆಯಾಗಿರುವ ಯೋಜನೆಯ ಪ್ರಗತಿ ಸಾಧಿಸುವಂತೆ ಮತ್ತು ಸ್ಟೀವರ್ಟ್ ಹಿಲ್ ಬಳಿ ಕಸವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು.

(ಮೊದಲ ಪುಟದಿಂದ) ಕೆಟ್ಟಿರುವ ಯಂತ್ರವನ್ನು ತ್ವರಿತವಾಗಿ ಸರಿಪಡಿಸಿ ಕಸ ಸಂಸ್ಕರಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಮತ್ತು ಆಸ್ತಿ ತೆರಿಗೆ, ಆದಾಯ ತೆರಿಗೆ, ನೀರಿನ ತೆರಿಗೆಯನ್ನು ಚಾಚು ತಪ್ಪದೇ ವಸೂಲಿ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ, ಕಟ್ಟಡಗಳ ಬಾಡಿಗೆ ವೆಚ್ಚವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ ಅರ್ಹರಿಗೆ ಮನೆ ನಿರ್ಮಿಸಿಕೊಡು ವಂತೆಯೂ ನಿರ್ದೇಶಿಸಿದರು.

ನಗರಾಭಿವೃದ್ಧಿ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ನಗರಸಭೆಯ ವ್ಯವಸ್ಥಾಪಕರಾದ ಸುಜಾತ, ತಾಹಿರ್, ರಮೇಶ್, ಸಿಬ್ಬಂದಿಗಳು ಇದ್ದರು.