ಮಡಿಕೇರಿ, ಅ. 11: ನಗರಸಭೆಯಿಂದ ಅಂದಾಜು ರೂ. 5 ಕೋಟಿ ವೆಚ್ಚದಲ್ಲಿ ನಗರದ ವೆಬ್ಸ್ ಬಳಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಂಡು, ಕಳೆದ ಮಾರ್ಚ್‍ನಲ್ಲಿ ಉದ್ಘಾಟನೆ ಗೊಂಡಿದ್ದರೂ, ಇದುವರೆಗೆ ಖಾಸಗಿ ಬಸ್‍ಗಳ ಸಂಚಾರಕ್ಕೆ ನಿರ್ದಿಷ್ಟ ಮಾರ್ಗಸೂಚಿಯಿಲ್ಲದೆ ಗೊಂದಲ ಮುಂದುವರಿದಿದೆ. ಈ ಸಂಬಂಧ ತಾ. 3 ರಂದು ವಿಶೇಷ ಸಭೆ ನಡೆಸಿದ ಬಳಿಕವೂ ಸೂಕ್ತ ತೀರ್ಮಾನ ಕೈಗೊಳ್ಳುವಲ್ಲಿ ನಗರಸಭೆಯಿಂದ ಸಾಧ್ಯವಾಗಿಲ್ಲ.

ಈಗಾಗಲೇ ಪೊಲೀಸ್ ಇಲಾಖೆಯಿಂದ ನಗರದಲ್ಲಿ ರಸ್ತೆ ಸಂಚಾರ ಮಾರ್ಗದೊಂದಿಗೆ, ಖಾಸಗಿ ಬಸ್‍ಗಳ ಓಡಾಟಕ್ಕೆ ಅಗತ್ಯ ಮೂಲಸೌಲಭ್ಯ ಅನುಸರಿಸಲು ರೂಪುರೇಷೆ ಸಿದ್ಧಗೊಳಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಆ ದಿಸೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ನಗರಸಭೆಗೂ ಪತ್ರ ಮುಖೇನ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಈ ಸಂಬಂಧ ಸಭೆಯಲ್ಲಿ ಸಮಾಲೋಚಿಸಿದರೂ, ಯಾವದೇ ನಿರ್ಣಯ ಕೈಗೊಂಡಿಲ್ಲ.

ಪೊಲೀಸ್ ಇಲಾಖೆಯು ಖಾಸಗಿ ಬಸ್‍ಗಳು ಇಲ್ಲಿನ ಚಿಕ್ಕಪೇಟೆಯಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ರಾಜಾಸೀಟ್‍ಗಾಗಿ ಹೊಸ ಬಡಾವಣೆ ರಸ್ತೆಯಿಂದ ಎಲ್‍ಐಸಿ ಎದುರು ನೂತನ ಬಸ್ ನಿಲ್ದಾಣಕ್ಕೆ ಸಾಗುವಂತೆ ಸಲಹೆ ನೀಡಿದೆ. ಅಲ್ಲಿಂದ ಹೊರಡುವ ಬಸ್‍ಗಳು ಪತ್ರಿಕಾಭವನ ಮೂಲಕ ಕೈಗಾರಿಕಾ ಬಡಾವಣೆ ರಸ್ತೆಗಾಗಿ ಮೋಣಪ್ಪ ಗ್ಯಾರೇಜ್ ಬಳಿ ತಿರುವಿನಿಂದ ರಾಜ್ಯ ಸಾರಿಗೆ ಬಸ್ ನಿಲ್ದಾಣಕ್ಕಾಗಿ ಹಳೆಯ ಬಸ್ ನಿಲ್ದಾಣ, ಪೊಲೀಸ್ ಠಾಣಾ ಮುಂಭಾಗ, ಚಿಕ್ಕಪೇಟೆಗಾಗಿ ತೆರಳಲು ಮಾರ್ಗಸೂಚಿ ಕಲ್ಪಿಸಿದೆ.

ಕೈಗಾರಿಕಾ ಬಡಾವಣೆ ಸಹಿತ ಇಲಾಖೆ ಸೂಚಿಸಿರುವ, ಮಾರ್ಗಸೂಚಿಯಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆಯೊಂದಿಗೆ ಹತ್ತಾರು ಕಡೆಗಳಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆಯ ಗಮನ ಸೆಳೆಯಲಾಗಿದೆ. ಇನ್ನು ಅಲ್ಲಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಸಾರ್ವಜನಿಕರು, ಪಾದಚಾರಿಗಳಿಗೆ ಸಂಚರಿಸಲು ತೊಂದರೆ ಎದುರಾಗದಂತೆ ಮಾರ್ಗ ಅಗಲಗೊಳಿಸಿ ಪಾದಚಾರಿ ಮಾರ್ಗ (ಫುಟ್‍ಪಾತ್)ಕ್ಕೆ ಸಲಹೆ ನೀಡಲಾಗಿದೆ.

ಪ್ರಮುಖ ಕಡೆ : ಮುಖ್ಯವಾಗಿ ಮೋಣಪ್ಪ ಗ್ಯಾರೇಜ್ ಬಳಿ 30 ಅಡಿ ರಸ್ತೆ ಅಗಲೀಕರಣ, ಪತ್ರಿಕಾಭವನ ಬಳಿ 25 ಅಡಿ, ರಾಜಾಸೀಟ್ ಮಾರ್ಗ ಅಗಲೀಕರಣದೊಂದಿಗೆ ದುರಸ್ತಿ ಸೇರಿದಂತೆ ಬಸ್ ಮಾರ್ಗದ ಅಲ್ಲಲ್ಲಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್‍ಗಳ ಸ್ಥಳಾಂತರಕ್ಕೆ ಲಿಖಿತವಾಗಿ ತಿಳಿಸಲಾಗಿದೆ.

ಪಾದಚಾರಿ ಮಾರ್ಗ: ಖಾಸಗಿ ನೂತನ ನಿಲ್ದಾಣದಿಂದ ಕಾವೇರಿ ಹಾಲ್, ರಾಜಾಸೀಟ್ ರಸ್ತೆಯಿಂದ ನೂತನ ನಿಲ್ದಾಣ, ಮುಂದೆ ಸಾಯಿ ಮೈದಾನ ತನಕ ಹಾಗೂ ಮೋಣಪ್ಪ ಗ್ಯಾರೇಜ್ ಬಳಿಯಿಂದ ರಾಜ್ಯ ಸಾರಿಗೆ ನಿಲ್ದಾಣ ತನಕ ರಸ್ತೆಯ ಇಕ್ಕಡೆಗಳಲ್ಲಿ ಪಾದಚಾರಿ ಮಾರ್ಗಕ್ಕೆ ಸೂಚಿಸಲಾಗಿದೆ.

ಬ್ಲಿಂಕರ್ಸ್ ಅಳವಡಿಕೆ : ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸ (ರೋಸ್ ಬ್ಯಾಂಕ್) ಬಳಿ, ಗೌಳಿಬೀದಿ ತಿರುವು, ಆರ್. ಆರ್. ಆರ್ಕೆಡ್ ತಿರುವು, ಮೋಣಪ್ಪ ಗ್ಯಾರೇಜ್, ಕುಂದೂರು ಮೊಟ್ಟೆ ದೇವಾಲಯ, ಪತ್ರಿಕಾ ಭವನ ಮುಂತಾದೆಡೆಗಳಲ್ಲಿ ಬ್ಲಿಂಕರ್ಸ್ ಅಳವಡಿಸುವಂತೆಯೂ ನಗರಸಭೆಯ ಗಮನ ಸೆಳೆಯಲಾಗಿದೆ.

ಜಂಟಿ ಸಭೆಗೆ ಸಲಹೆ : ಜಿಲ್ಲಾಡಳಿತದ ಸಲಹೆ ಅನುಷ್ಠಾನಗೊಳಿಸಿ ಬಸ್ ಸಂಚಾರ ಮಾರ್ಗ ರೂಪಿಸಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ಜಂಟಿ ಸಭೆ ಕರೆಯಲು ತಾ.3 ರ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಪ್ರಕಾರ ಪೊಲೀಸ್, ಆರ್‍ಟಿಓ, ಬಸ್ ಮಾಲೀಕರು, ಶಾಸಕರುಗಳ ಸಹಿತ ಸ್ಥಳೀಯ ಮುಖಂಡರ ಅಭಿಪ್ರಾಯ ಕ್ರೋಢೀಕರಿಸಿ ಅಗತ್ಯ ತೀರ್ಮಾನಕ್ಕೆ ಬರಬಹುದೆಂಬ ಸದಾಭಿಪ್ರಾಯ ವ್ಯಕ್ತಗೊಂಡಿದೆ.