ಮಡಿಕೇರಿ, ಅ. 11: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದವರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ, ಸರಕಾರ ಸಂಘ-ಸಂಸ್ಥೆಗಳು ವಿವಿಧ ಸಮಾಜ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಅಖಿಲ ಕೊಡವ ಸಮಾಜ ಸಂತ್ರಸ್ತರಾದವರು ಧೃತಿಗೆಡದಿರುವಂತೆ ಮನವಿ ಮಾಡಿದೆ.

ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಮಾಜದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸಮಾಜದ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿದ್ದು, ದುರಂತದ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ಸ್ಪಂದಿಸಿರುವ ಸರ್ವರ ಸಹಕಾರವನ್ನು ಸ್ಮರಿಸಲಾಯಿತು. ಅಖಿಲ ಕೊಡವ ಸಮಾಜದಿಂದಲೂ ಹೆಚ್ಚು ಪ್ರಚಾರಕ್ಕೆ ಒತ್ತು ನೀಡದೆ ನೆರವು ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಪ್ರಯತ್ನ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ. ನೊಂದವರು ಯಾವದೇ ಮುಜುಗರ ಪಡದೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕೋರಲಾಯಿತು. ಈ ಬಗ್ಗೆ ಸಮಾಜ ಯಾವದೇ ಕೆಲಸ ಮಾಡಿಲ್ಲ ಎಂಬಿತ್ಯಾದಿ ಅಪಪ್ರಚಾರಗಳು ನಡೆದಿವೆ. ಈ ಬಗ್ಗೆ ಕಿವಿಗೊಡುವದಿಲ್ಲ. ಸಮಾಜದ ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಅವರ ಪುತ್ರಿ ಶಾಂತಲ ಮುತ್ತಣ್ಣ ಅವರು ಕೊಯಮುತ್ತೂರಿನಲ್ಲಿ ಡಿಸೈನರ್ ಆಗಿದ್ದು, ಇವರ ಮೂಲಕ ರೂ. 3 ಲಕ್ಷಕ್ಕೂ ಅಧಿಕ ಮೌಲ್ಯದ ಉಡುಪುಗಳು ಮತ್ತಿತರ ವಸ್ತುಗಳು ಬಂದಿದ್ದು, ಇವುಗಳನ್ನು ನೇರವಾಗಿ ಸಂತ್ರಸ್ತರಿಗೆ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ತಲಪಿಸಲಾಗಿದೆ ಎಂದು ಮಾಹಿತಿ ನೀಡಿದ ಮೊಣ್ಣಪ್ಪ ಅವರು ಇನ್ನಷ್ಟು ಸಹಕಾರ ನೀಡಲು ಸಮಾಜ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದರು. ಕೊಡಗು ಸೇವಾಕೇಂದ್ರದ ಕರ್ತವ್ಯದ ಕುರಿತೂ ಮೊಣ್ಣಪ್ಪ ಶ್ಲಾಘಿಸಿದರು.

ನವೆಂಬರ್‍ನಲ್ಲಿ ಸಮಾಜದ ಮಹಾಸಭೆ ನಡೆಸಲು ಈ ಸಂದರ್ಭ ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾರ್ಯಾಧ್ಯಕ್ಷ ನಿವೃತ್ತ ಪ್ರೊ. ಇಟ್ಟೀರ ಕೆ. ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ, ಸುಗುಣಮುತ್ತಣ್ಣ, ರಾಣು ಅಪ್ಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.