ಮಡಿಕೇರಿ, ಅ. 11: ರಣಭೀಕರ ಮಹಾಮಳೆ, ಭೂಕುಸಿತದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇದೀಗ ಭಾರೀ ಹೊಡೆತ ಬಿದ್ದಿದೆ. ಪ್ರವಾಸಿಗರ ಸ್ವರ್ಗವೆಂತಲೂ ಕರ್ನಾಟಕದ ಕಾಶ್ಮೀರವೆಂತಲೂ ಕರೆಸಿಕೊಳ್ಳುವ ಕೊಡಗಿನಲ್ಲಿ ಸುರಿಯೋ ಮಳೆಯನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರು ಮಳೆಗಾಲದಲ್ಲಿ ಲಗ್ಗೆಯಿಡುತ್ತಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ಪ್ರವಾಸೋದ್ಯಮವು ನೆಲಕಚ್ಚಿದ್ದು, ಚೇತರಿಕೆಗೆ ಹಲವು ದಿನಗಳೇ ಹಿಡಿಯಲಿದೆ ಎಂದು ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡವರು ನೋವು ತೋಡಿಕೊಳ್ಳುತ್ತಿದ್ದಾರೆ.

ಮಳೆ ನಿಂತರೂ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಇನ್ನೂ ಮನೆ ಮಾಡಿದೆ. ಎಲ್ಲೆಡೆ ಪ್ರವಾಸಿಗರಿಲ್ಲದೆ ಭಣಗುಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಪ್ರವಾಸಿ ತಾಣಗಳಾದ ರಾಜಾಸೀಟ್, ಓಂಕಾರೇಶ್ವರ ದೇಗುಲ, ತಲಕಾವೇರಿ, ಭಾಗಮಂಡಲ ಅಬ್ಬಿ, ಮಲ್ಲಳ್ಳಿ, ಇರ್ಪು ಜಲಪಾತಗಳು, ದುಬಾರೆ ಸಾಕಾನೆ ಶಿಬಿರ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯದತ್ತ ಪ್ರವಾಸಿಗರ ಸುಳಿವಿಲ್ಲ. ತಡಿಯಂಡಮೋಳ್, ಪುಷ್ಪಗಿರಿ, ಬ್ರಹ್ಮಗಿರಿ ಮುಂತಾದೆಡೆ ಚಾರಣ ನಿಷೇಧಿಸಲಾಗಿದೆ.

ಪ್ರವಾಸಿ ತಾಣಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರೂ ಅಂಗಡಿ ಬಂದ್ ಮಾಡಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಜಿಲ್ಲಾಡಳಿತ ಸೂಚಿಸಿರುವ ಅವಧಿ ಮುಗಿದರೂ ಪ್ರವಾಸೋದ್ಯಮ ಚೇತರಿಸಿಕೊಳ್ಳುವದು ಕಷ್ಟ. ಎತ್ತರ ಪ್ರದೇಶದಲ್ಲಿರುವ ಹೋಂಸ್ಟೇಗಳಿಗೆ ತೆರಳಲು ರಸ್ತೆಯೂ ಇಲ್ಲ. ಭೂಕುಸಿತದ ಆತಂಕದಿಂದ ಇನ್ಮುಂದೆ ಪ್ರವಾಸಿಗರು ಈ ಪ್ರದೇಶಕ್ಕೆ ಬರಲೂ ಹಿಂದೇಟು ಹಾಕುತ್ತಾರೆ. ಸಾವಿರಾರು ಕುಟುಂಬಗಳಿಗೆ ಪ್ರವಾಸೋದ್ಯಮ ಜೀವನ ಕಲ್ಪಿಸಿತ್ತು. ಬರೀ ಕೃಷಿಕರಿಗಲ್ಲದೇ ಹೋಂಸ್ಟೇ, ರೆಸಾರ್ಟ್ ಮಾಲೀಕರು, ಕಾರ್ಮಿಕರು, ಬಾಡಿಗೆಯ ಜೀಪು ಓಡಿಸುತ್ತಿದ್ದವರು, ವ್ಯಾಪಾರಿಗಳು, ಹೊಟೇಲ್ ಮಾಲೀಕರು, ಸಂಬಾರ ಪದಾರ್ಥ ಮಾರಾಟಗಾರರಿಗೂ ಮಳೆಯು ಸಂಕಷ್ಟ ತಂದೊಡ್ಡಿದೆ. ಮಡಿಕೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ದುಬಾರೆ ಸಾಕಾನೆ ಶಿಬಿರಕ್ಕೆ ಪ್ರತಿ ತಿಂಗಳು 25 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಮಳೆಯ ಅನಾಹುತದಿಂದ ಯಾರೂ ಇತ್ತ ಕಡೆ ಬರುತ್ತಿಲ್ಲ. ಆಗಸ್ಟ್‍ನಲ್ಲಿ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬರುತ್ತಿದ್ದರು. ವಸತಿಗೃಹಗಳೂ ಭರ್ತಿ ಆಗುತ್ತಿದ್ದವು. ಸೆಪ್ಟೆಂಬರ್, ಅಕ್ಟೋಬರ್‍ನಲ್ಲಿ ಪ್ರವಾಸಿಗರಿಗೆ ಕೊಠಡಿಗಳೇ ಸಿಗುತ್ತಿರಲಿಲ್ಲ. ಆದರೆ, ಮಹಾಮಳೆ ಕೊಡಗಿನ ಬದುಕಿನ ಚಿತ್ರಣವನ್ನೇ ಬದಲಾಯಿಸಿತು. ಪ್ರವಾಸೋದ್ಯಮ ಜತೆಗೆ ಜನರ ಜೀವನ ಸುಧಾರಣೆಗೂ ಹಲವು ತಿಂಗಳು ಬೇಕು ಎಂದು ಕೆಲವು ಉದ್ಯಮಿಗಳು ಮಾಹಿತಿ ನೀಡುತ್ತಾರೆ.

ಮಹಾಮಳೆಯ ಪರಿಣಾಮದಿಂದ ತತ್ತರಿಸಿ ಹೋಗಿದ್ದ ಕೊಡಗಿನ ವಾತಾವರಣ ಇದೀಗ ಸಹಜ ಸ್ಥಿತಿಗೆ ಬರುತ್ತಿದ್ದರೂ ಆಗ ಅಬ್ಬರಿಸಿ ಬೊಬ್ಬಿರಿದ ಮಳೆಯನ್ನ ನೋಡಿ ದಂಗಾಗಿದ್ದ ಜನರು, ಇದೀಗ ಪೂರ್ವಾಹ್ನ ಸೂರ್ಯನ ಬಿರುಬಿಸಿಲನ್ನ ನೋಡಿ ಹೈರಾಣಾಗಿ ಹೋಗಿದ್ದಾರೆ. ಮಡಿಕೇರಿ ವ್ಯಾಪ್ತಿಯಲ್ಲಿ ಅಪರಾಹ್ನ ಸುಮಾರಾಗಿ ಮೋಡ ಕವಿದ ವಾತಾವರಣ ಸಂಜೆ ವೇಳೆಗೆ ಭಯ ಹುಟ್ಟಿಸುವ ಮಳೆ ಸುರಿಯುತ್ತದೆ. ಸದ್ಯಕ್ಕಂತೂ ಮಳೆರಾಯ ಬಿಡುವು ಪಡೆದಿದ್ರೂ ಪ್ರವಾಸಿಗರು ಮಾತ್ರ ಕೊಡಗು ಜಿಲ್ಲೆಗೆ ಕಾಲಿಡಲು ಹೆದರಿಕೊಳ್ತಿದ್ದಾರೆ. ಮುಖ್ಯವಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಅನೇಕ ಉದ್ಯಮಗಳು ಇದೀಗ ನೆಲೆಕಚ್ಚಿವೆ.

ಜುಲೈ-ಆಗಸ್ಟ್‍ನಲ್ಲಿ ಕೊಡಗಿನಲ್ಲಿ ಸುರಿದ ಮಹಾಮಳೆ, ಆ ಬಳಿಕ ಮಡಿಕೇರಿ ಸುತ್ತಮುತ್ತ ಉಂಟಾದ ಜಲಪ್ರಳಯ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಆ ಕರಾಳ ನೆನಪಿನಿಂದ ಹೊರಬರೋ ಪ್ರಯತ್ನವನ್ನ ಸ್ಥಳೀಯರು ಮಾಡಿದ್ರೂ ಕೂಡ ಸಾಧ್ಯವಾಗ್ತಿಲ್ಲ. ಮಡಿಕೇರಿ ಸುತ್ತಮುತ್ತ ಉಂಟಾದ ಭೂ ಕುಸಿತ, ಜಲಪ್ರಳಯದಿಂದ ಜಿಲ್ಲೆಗೆ ಪ್ರವಾಸಿಗರು ಬೇಟಿ ನೀಡಲು ಹೆದರುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮುಖ್ಯವಾಗಿ ಕೇಂದ್ರ ಸ್ಥಾನವಾದ ಮಡಿಕೇರಿಯ ಬಹುತೇಕ ವ್ಯಾಪಾರ ವಹಿವಾಟು ಪ್ರವಾಸಿಗರ ಮೇಲೆಯೇ ಅವಲಂಬಿತವಾಗಿತ್ತು. ಆದರೆ ಮಡಿಕೇರಿ ದುರಂತದ ಬಳಿಕ ಪ್ರವಾಸಿಗರ ಸಂಖ್ಯೆ ಒಂದೇ ಸಮನೆ ಇಳಿಮುಖ ಆಗಿದ್ದರಿಂದ ಗಣನೀಯ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ಕುಸಿದಿದೆ.

ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಸೆಪ್ಟೆಂಬರ್‍ನಲ್ಲಿ ನಿತ್ಯ ಸರಾಸರಿ ನಾಲ್ಕು ಸಾವಿರ ಮಂದಿ ಆಗಮಿಸುತ್ತಿದ್ದರು. ಆದರೆ, ಇತ್ತಿಚಿಗೆ ಪ್ರತಿನಿತ್ಯ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭೇಟಿ ನೀಡುತ್ತಿದ್ದಾರೆ. ಇದು ಪ್ರವಾಸೋದ್ಯಮವನ್ನು ನಂಬಿರುವವರಿಗೆ ಆಘಾತ ತಂದಿದೆ. ಭಾಗಮಂಡಲದಲ್ಲಿ ಮಧ್ಯಾಹ್ನದ ವೇಳೆ ಕನಿಷ್ಟವೆಂದರೂ

ಸಾವಿರ ಮಂದಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದರು. ಈಗ ಯಾರೂ ಇಲ್ಲ. ಇನ್ನೂ ವಾರಾಂತ್ಯದಲ್ಲಿ ಮಡಿಕೇರಿಯ ರಾಜಾಸೀಟ್ ತುಂಬಿತುಳುಕುತ್ತಿತ್ತು. ಈ ಅವಧಿಯಲ್ಲಿ ಸುಮಾರು 4 ರಿಂದ 5 ಸಾವಿರ ಮಂದಿ ಆಗಮಿಸುತ್ತಿದ್ದರು. ರಾಜಾಸೀಟ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಪ್ರವಾಸಿಗರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ಪರದಾಡುತ್ತಿದ್ದರು. ರಾಜಾಸೀಟ್‍ಗೆ ಇದೀಗ ದಿನಕ್ಕೆ ಕೇವಲ 50-60 ಮಂದಿ ಆಗಮಿಸುತ್ತಿದ್ದಾರೆ. ಕುಶಾಲನಗರದ ನಿಸರ್ಗಧಾಮ, ದುಬಾರೆ ಆನೆ ಶಿಬಿರದಲ್ಲಿ ಕಾಲಿಡಲು ಕೂಡ ಸ್ಥಳವಿರುತ್ತಿರಲಿಲ್ಲ. ಈಗ ಅಲ್ಲಿಯೂ ಬಿಕೋ ಎನ್ನುತ್ತಿದೆ. ಚೇಲಾವರ ಫಾಲ್ಸ್, ಇರ್ಪು ಫಾಲ್ಸ್ ಕೂಡ ಜನರಿಲ್ಲದೆ ಭಣಗುಡುತ್ತಿವೆ. ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿಯೂ ಪ್ರವಾಸಿಗರು ಕಾಣುತ್ತಿಲ್ಲ.

ಕಳೆದ ತಿಂಗಳು ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಸ್ಥಿತಿಯನ್ನು ಕಂಡು ಜನರು ಬೆಚ್ಚಿದ್ದಾರೆ. ರಸ್ತೆಗಳೇ ಕೊಚ್ಚಿಕೊಂಡು ಹೋಗಿರುವದನ್ನು ಗಮನಿಸಿ ತಮ್ಮ ವಾಹನಗಳಲ್ಲಿ ಅತ್ತ ತೆರಳುವದು ಸೂಕ್ತವಲ್ಲ ಎಂಬ ಭಾವನೆ ಇನ್ನೂ ಇದೆ. ಸದ್ಯ ಮಡಿಕೇರಿ ನಗರ ಸಹಜ ಸ್ಥಿತಿಗೆ ಮರಳುತ್ತಿರೋದ್ರಿಂದ ಪ್ರವಾಸಿಗರು ಜಿಲ್ಲೆಗೆ ಬರಬಹುದಾಗಿದೆ. ಇದು ಪ್ರವಾಸಿಗರನ್ನೇ ನಂಬಿಕೊಂಡಿದ್ದ ಜನರ ಜೀವನ ನಿರ್ವಹಣೆಗೆ ಅನೂಕೂಲವಾಗಲಿದೆ.

- ರಂಜಿತಾ ಕಾರ್ಯಪ್ಪ