ಮಡಿಕೇರಿ, ಅ.13: ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳಿಗೆ ನಡೆಯುವ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಂಬಂಧಿಸಿದ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಂಸಿಸಿ ತಂಡಗಳು ಮೇಲ್ವಿಚಾರಣೆಯೊಂದಿಗೆ ಸಿಸಿ ಟಿ.ವಿ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮತದಾರರ ಪಟ್ಟಿ ಸರಿ ಇರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಅಂತಿಮ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗಿರುವ ವಾರ್ಡ್‍ವಾರು ಮತದಾರರ ಪಟ್ಟಿಯನ್ನು ಇಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಲ್.ಪ್ರವೀಣ್ ಕುಮಾರ್ ಮಾತನಾಡಿ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಣ ಮಾಡಲು ಮತ್ತು ಮತಪತ್ರದಲ್ಲಿ ‘ನೋಟಾ’ವನ್ನು ಮುದ್ರಿಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು ಹಾಗೂ ಪಟ್ಟಣ ಪಂಚಾಯತಿವಾರು ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಎಲ್ಲಾ ಚುನಾವಣಾ ಕರ್ತವ್ಯಗಳ ಸಂಪೂರ್ಣ ಮೇಲುಸ್ತುವಾರಿ ಮಾಡಬೇಕು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಹಲವು ಸಲಹೆ ನೀಡಿದರು. ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ಸೋಮವಾರಪೇಟೆ ತಹಶೀಲ್ದಾರ್ ಮಹೇಶ್, ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಮೋದ್.ಸಿ.ಎಂ., ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಾಲ್ರ್ಸ್ ಡಿಸೋಜ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಶಿವರಾಜು, ಹೆಚ್.ಪಿ.ಗಣೇಶ್, ವೀರಾಜಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರ, ಚುನಾವಣಾ ನೋಡಲ್ ಅಧಿಕಾರಿಗಳು ಇತರರು ಇದ್ದರು.