ವೀರಾಜಪೇಟೆ, ಅ. 12: ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಲ್ಲೆಯ ಅಭಿವೃದ್ಧಿಗಾಗಿ 2018ರ ಮಾರ್ಚ್ ತಿಂಗಳಲ್ಲಿ ಐವತ್ತು ಕೋಟಿ ವಿಶೇಷ ಪ್ಯಾಕೇಜ್ ಹಣ ಅನುದಾನವಾಗಿ ನೀಡಲಾಗಿತ್ತು. ಟೆಂಡರ್ ಪ್ರಕಿಯೆಯು ನಡೆದಿತ್ತು. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಕಾಮಗಾರಿ ವಿಳಂಬವಾಗಿದೆ. ಅದೇ ಕ್ರಿಯಾ ಯೋಜನೆಯನ್ನು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಬದಲಾವಣೆ ಮಾಡಿ ಹೊಸ ಕ್ರಿಯಾ ಯೋಜನೆಯನ್ನು ರೂಪಿಸಿ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಪೋರೆರ ಬಿದ್ದಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಉಸ್ತುವಾರಿ ಸಚಿವ ಸೀತಾರಾಂ ಹಾಗೂ ಅವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಅಭಿವೃದ್ಧಿಗಾಗಿ ರೂ. ಐವತ್ತು ಕೋಟಿಗಳ ವಿಶೇಷ ಪ್ಯಾಕೇಜ್‍ನ್ನು ಸರಕಾರದಿಂದ ಬಿಡುಗಡೆಗೊಳಿಸಿದ್ದರು. ಇದನ್ನು ಉದ್ದೇಶಪೂರ್ವಕವಾಗಿ ಬದಲಿಸಿ ಶಾಸಕ ಕೆ.ಜಿ. ಬೋಪಯ್ಯ ಹಿಂದಿನ ಕ್ರಿಯಾಯೋಜನೆಯನ್ನು ಕೈಬಿಟ್ಟು ಹೊಸ ಕ್ರಿಯಾಯೋಜನೆ ತಯಾರಿಸಿರುವದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ ಎಂದರು. ಗ್ರಾಮಾಂತರ ಪ್ರದೇಶದ ರಸ್ತೆ ಅಭಿವೃದ್ಧಿ ಇತರ ಜನಪರ ಕಾಮಗಾರಿಗಳು ಚುನಾವಣೆಯ ನಂತರ ರಾಜಕೀಯ ರಹಿತವಾಗಿ ಆದ್ಯತೆಯಲ್ಲಿ ಹಿಂದಿನ ಕ್ರಿಯಾ ಯೋಜನೆಯನ್ನೇ ಮುಂದುವರೆಸುವಂತೆ ಆಗ್ರಹಿಸಿದರು. ಈ ವಿಷಯದಲ್ಲಿ ಸಂಬಂಧಿಸಿದ ಸಚಿವರಿಗೂ ಮನವಿ ಸಲ್ಲಿಸಿ ಒತ್ತಡ ತಂದಿರುವದಾಗಿ ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ ಹಿಂದಿನ ರೂ.ಐವತ್ತು ಕೋಟಿ ಪ್ಯಾಕೇಜ್‍ನ ಕ್ರಿಯಾ

ಯೋಜನೆಯನ್ನು ಪಕ್ಷಬೇಧ ಮರೆತು ರಾಜಕೀಯ ರಹಿತವಾಗಿ ಗ್ರಾಮದ ಅಭಿವೃದ್ಧಿಗಾಗಿ ಎಲ್ಲರಿಗೆ ಸಮಾನ ಅವಕಾಶ ನೀಡಲಾಗಿತ್ತು. ಈಗ ರಾಜಕೀಯವಾಗಿ ಶಾಸಕರು ಹೊಸದಾಗಿ ಮಾಡಿರುವ ಕಿಯಾ ಯೋಜನೆಗಳು ಏಕಪಕ್ಷೀಯವಾಗಿದೆ ಎಂದು ಟೀಕಸಿದರು.

ಕಾಂಗ್ರೆಸ್ ಮುಖಂಡ ವರ್ಗಿಸ್ ಮಾತನಾಡಿ ನಮ್ಮ ಸರ್ಕಾರ ಕೋಮದಲ್ಲಿದೆ. ಯಾವದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್ ಮುಖಂಡರು ಯಾವದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. 15 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಮುಂಖಂಡರ ವಿರುದ್ಧ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಕೆದಮುಳ್ಳೂರು ಸಮಿತಿ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಕಾಕೋಟುಪರಂಬು ಅಧ್ಯಕ್ಷ ಮಂಡೇಟ್ಟಿರ ಅನೀಲ್ ಅಯ್ಯಪ್ಪ, ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯ ಫಾರೂಕ್ ಉಪಸ್ಥಿತರಿದ್ದರು.