ಮಡಿಕೇರಿ, ಅ. 12: ಇಲ್ಲಿನ ಐತಿಹಾಸಿಕ ಶ್ರೀ ಕೋಟೆ ಮಹಾಗಣಪತಿ ಸನ್ನಿಧಿಯಲ್ಲಿ; ಇಂದು ದಸರಾ ಮಂಟಪ ಸಮಿತಿಯಿಂದ ಗಣಹೋಮದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಾಡಿನ ಸುಭಿಕ್ಷೆಯೊಂದಿಗೆ, ಪ್ರಾಕೃತಿಕ ವಿಕೋಪ ನಿವಾರಣೆಗಾಗಿ ವಿಶೇಷವಾಗಿ ಈ ಸಂದರ್ಭ ಪ್ರಾರ್ಥಿಸಲಾಯಿತು. ಮಹಾಪೂಜೆಯೊಂದಿಗೆ ಪೂರ್ಣಾಹುತಿ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.

ನಗರ ದಸರಾ ಸಮಿತಿ ಅಧ್ಯಕ್ಷೆ ಹಾಗೂ ನಗರಸಭಾ ಅಧ್ಯಕ್ಷೆರಾಗಿರುವ ಕಾವೇರಮ್ಮ ಸೋಮಣ್ಣ, ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು, ಕೋಟೆ ಗಣಪತಿ ದಸರಾ ಮಂಟಪ ಸಮಿತಿ ಸಹಿತ ಪೂಜೆಯಲ್ಲಿ ಇತರ ಪ್ರಮುಖರು ಭಾಗಿಯಾಗಿದ್ದರು. ಆ ಬಳಿಕ ಪ್ರಸಾದದೊಂದಿಗೆ ಅನ್ನದಾನ ಕೈಗೊಳ್ಳಲಾಗಿತ್ತು.