ಶ್ರೀಮಂಗಲ, ಅ. 12: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ತಿಂಗಳು ಜಲಪ್ರಳಯಕ್ಕೆ ಸಿಲುಕಿ ಸಂತ್ರಸ್ತರಾದ ಕುಟುಂಬದ ನಿರಾಶ್ರಿತ 130 ಮಕ್ಕಳಿಗೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯು ವಿದ್ಯಾಶ್ರಯ ನೀಡುತ್ತಿದ್ದು, ಕೆಲವು ಸಹೃದಯಿ ದಾನಿಗಳು ಧನಸಹಾಯ ಮಾಡುತ್ತಿದ್ದಾರೆ.

ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ತಾವಳಗೇರಿ ಗ್ರಾಮದ ಕೈಬಿಲೀರ ಪಾರ್ವತಿ ಬೋಪಯ್ಯ ಅವರು 10 ಸಾವಿರ ರೂ. ಗಳ ದೇಣಿಗೆಯನ್ನು ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಅವರಿಗೆ ನೀಡುವದರೊಂದಿಗೆ ಈ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ಪ್ರತಿ ತಿಂಗಳು ಒಂದು ಸಾವಿರ ರೂ. ಗಳ ಧನಸಹಾಯ ನೀಡುವದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಾಗುವ ಕಾರ್ಯಚಟುವಟಿಕೆ ನಡೆಸಲು ಸಹಕಾರ ನೀಡುವದಾಗಿ ತಿಳಿಸಿದ್ದಾರೆ. ಈ ಸಂದರ್ಭ ವಿದ್ಯಾಸಂಸ್ಥೆಯ ಉಪನ್ಯಾಸಕ ತಿಮ್ಮಯ್ಯ ಹಾಜರಿದ್ದರು.