ಕುಶಾಲನಗರ, ಅ. 13: ಕುಶಾಲನಗರದ ಸಾಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಾಯಿ ಬಾಬಾ ದೇವಾಲಯದಲ್ಲಿ ದಿವ್ಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಆರಂಭಗೊಂಡಿತು.
ಸಾಯಿ ಬಾಬಾ ಮಂದಿರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಪೂಜಾ ಕೈಂಕರ್ಯಗಳ ಹಿನ್ನೆಲೆ ಮಂದಿರದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಾವೇರಿ ನದಿಯಿಂದ ಮುತ್ತೈದೆಯರು ಕಲಶಗಳನ್ನು ಪ್ರತಿಷ್ಠಾಪನೆ ಮಾಡಿ ಗಂಗಾ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಗಂಗಾಜಲವನ್ನು ತಂದು ಸಾಯಿ ದೇವರ ವಿಗ್ರಹದ ಮೇಲೆ ಅಭಿಷೇಕ ಮಾಡಿದರು.
ಬೆಂಗಳೂರಿನ ರಾಮಲಿಂಗರಾವ್ ಅವರ ನೇತೃತ್ವದಲ್ಲಿ ಪೂಜೆಗಳು ನೆರವೇರಿದವು. ಸಾಯಿ ಮಂದಿರದ ಮುಖ್ಯ ಧರ್ಮದರ್ಶಿ ಧರೇಶ್ ಬಾಬು, ಪ್ರಮುಖರಾದ ಎಸ್.ಎಲ್. ಶ್ರೀಪತಿ, ಮುನಿಸ್ವಾಮಿ, ಓಬುಳ್ ರೆಡ್ಡಿ, ರವಿಕುಮಾರ್, ನಂಜುಂಡಸ್ವಾಮಿ, ಎಂ.ಕೆ. ಚಂದ್ರಶೇಖರ್, ಶ್ರೀನಿವಾಸ್ ಮತ್ತಿತರರು ಇದ್ದರು.