ಸೋಮವಾರಪೇಟೆ, ಅ. 12: ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕಂದಾಯ ಗ್ರಾಮಗಳನ್ನು ಅತಿವೃಷ್ಟಿ ಪೀಡಿತ ಗ್ರಾಮಗಳೆಂದು ಘೋಷಿಸಿ, ಅಗತ್ಯ ಪರಿಹಾರ ಒದಗಿಸಲು ಆಗ್ರಹಿಸಿ ತಾ. 15 ರಂದು ಪ್ರತಿಭಟನೆ ನಡೆಸಲು ಕಿರಗಂದೂರು ಗ್ರಾಮಸಭೆಯಲ್ಲಿ ಸಾರ್ವಜನಿಕರು ತೀರ್ಮಾನಿಸಿದರು.

ಕಿರಗಂದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಳೆಹಾನಿ ಸಂತ್ರಸ್ತರು ಆಕ್ರೋಶಗೊಂಡರಲ್ಲದೇ, ತಾ.15ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡುವ ತೀರ್ಮಾನ ಕೈಗೊಂಡರು.

ಪಂಚಾಯಿತಿ ವ್ಯಾಪ್ತಿಯ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಬಹಳಷ್ಟು ಹಾನಿಯಾಗಿದೆ. ಇದುವರೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿಲ್ಲ. ಇಂದಿನ ಸಭೆಗೆ ತಹಶೀಲ್ದಾರರನ್ನು ಕರೆಸುವಂತೆ ಕೇಳಿಕೊಂಡಿದ್ದರೂ ಸಹ ತಹಶೀಲ್ದಾರರು ಗೈರು ಹಾಜರಾಗಿ, ಗ್ರಾಮ ಸಭೆಗೆ ಅವಮಾನ ಮಾಡಿದ್ದಾರೆ ಎಂದು ತಾಕೇರಿ, ಕಿರಗಂದೂರು, ಬಿಳಿಗೇರಿ ಗ್ರಾಮಮಂಡಳಿ ಅಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇವತ್ತಿನ ವಿಶೇಷ ಗ್ರಾಮಸಭೆಗೆ ಆಗಮಿಸುವಂತೆ ತಹಶೀಲ್ದಾರರಿಗೆ ಖುದ್ದು ಮನವಿ ಮಾಡಿಕೊಳ್ಳಲಾಗಿದೆ. ಆದರೂ ಬಂದಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರ ಹೇಳಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ತಹಶೀಲ್ದಾರ್ ಇಲ್ಲದ ಸಭೆಯನ್ನು ಬಹಿಷ್ಕರಿಸುವದಾಗಿ ಬೆದರಿಕೆ ಹಾಕಿದರು. ನಂತರ ತಾಕೇರಿ ಗ್ರಾಮ ಮಂಡಳಿಯ ಅಧ್ಯಕ್ಷರಾದ ಪೊನ್ನಪ್ಪ, ಸಮಾಧಾನಪಡಿಸಿ ಸಭೆಯ ಉದ್ದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಇಂಚಿಗಿಂತಲು ಹೆಚ್ಚು ಮಳೆಯಾಗಿದೆ. ತಾಕೇರಿ, ಬಿಳಿಗೇರಿ ಗ್ರಾಮದಲ್ಲಿ ಭೂಕುಸಿತವಾಗಿದೆ. ಕಿರಗಂದೂರು ಗ್ರಾಮದ ಮಕ್ಕಳಗುಡಿ ಬೆಟ್ಟ ಕುಸಿದು 100 ಎಕರೆಯಷ್ಟು ಕಾಫಿ ತೋಟ ನಾಶವಾಗಿದೆ. 46 ಕುಟುಂಬಗಳು ಆತಂಕದಲ್ಲಿ ಬದುಕುತ್ತಿದ್ದಾರೆ. ಕಾಫಿ, ಏಲಕ್ಕಿ, ಕಾಳುಮೆಣಸು ಶೇ. 80ರಷ್ಟು ಹಾನಿಯಾಗಿದೆ. ಈ ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯಗಳು ದೊರೆತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಸಂಘ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಈ ಭಾಗದ ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸೂಕ್ತ ಬೆಳೆಹಾನಿ ಪರಿಹಾರವನ್ನು ಎಲ್ಲಾ ರೈತರಿಗೂ ವಿತರಿಸಬೇಕು. ಮಳೆಹಾನಿ ಸಂತ್ರಸ್ತರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಕೂಡಲೆ ವಿತರಿಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಕಿರಗಂದೂರು, ತಾಕೇರಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದಯಾನಂದ್, ಎಸ್.ಪಿ.ಪೊನ್ನಪ್ಪ, ಬಿಳಿಗೇರಿ ಗ್ರಾಮದ ಉಪಾಧ್ಯಕ್ಷ ಗಾಂಧಿ, ತಾಪಂ ಸದಸ್ಯ ಬಿ.ಬಿ.ಸತೀಶ್, ಪಂಚಾಯಿತಿ ಸದಸ್ಯರಾದ ಭರತ್, ಬಿ.ಸಿ.ಪೊನ್ನಪ್ಪ, ಎನ್.ಗಣೇಶ್, ಸುನು ಕಿಶೋರ್, ಸುಜಾತ, ಪ್ರೇಮ, ಗೌರಿ, ಪಿ.ಬಿ.ಪೊನ್ನಪ್ಪ, ನೋಡೆಲ್ ಅಧಿಕಾರಿ ಶ್ರೀಕಾಂತ್, ಪಿಡಿಒ ತಮ್ಮಯ್ಯ ಮತ್ತಿತರರು ಇದ್ದರು. ಕಾಫಿ ಮಂಡಳಿ, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.