ಸಿದ್ದಾಪುರ, ಅ. 12: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಇಲ್ಲಿಯ ಪ್ಲಾಟಿನಂ ಪ್ಲಾಜಾ ಸಭಾಂಗಣದಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಮುಸ್ತಫ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಹೆಚ್ ಅಬೂಬಕರ್ ಮಾತನಾಡಿ, ಜನಪರ ಹೋರಾಟದೊಂದಿಗೆ ಕಳೆದ 9 ವರ್ಷಗಳಿಂದ ಪಕ್ಷವು ಕಾರ್ಯಾಚರಿಸುತ್ತಿದ್ದು, ಹೋರಾಟ ರಾಜಕೀಯ ಮತ್ತು ಚುನಾವಣಾ ರಾಜಕೀಯದಲ್ಲಿ ಪಕ್ಷವು ನಿರಂತರವಾಗಿದೆ. ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 87 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿ 18 ಸ್ಥಾನಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಯಿತು ಎಂದ ಅವರು ಇದೇ ತಿಂಗಳು ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್, ಕಣ್ಣೂರು ಜಿಲ್ಲಾ ಸಮಿತಿ ಸದಸ್ಯ ಫಾರೂಕ್ ಇರಿಟ್ಟಿ ಮಾತನಾಡಿದರು. ಹನೀಫ ಮಾಲ್ದಾರೆ ಸ್ವಾಗತಿಸಿ, ಸಂಶೀರ್ ನೆಲ್ಲಿಹುದಿಕೇರಿ ವಂದಿಸಿ ಸಾಬಿತ್ ವೀರಾಜಪೇಟೆ ನಿರೂಪಣೆ ಮಾಡಿದರು.

ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಗೋಣಿಕೊಪ್ಪ, ಪ್ರಮುಖರಾದ ಶೌಕತ್ ಅಲಿ, ಹಸ್ಸನ್, ಬಶೀರ್ ಸೇರಿದಂತೆ ಮತ್ತಿತರರು ಇದ್ದರು.