ವೀರಾಜಪೇಟೆ, ಅ. 12: ವೀರಾಜಪೇಟೆ ಗಾಂಧಿನಗರ ರಸ್ತೆಯಲ್ಲಿರುವ ಕಾಫಿ ಮಂಡಳಿಯ ಉಪನಿರ್ದೇಶಕರ ಕಚೇರಿಯಲ್ಲಿ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಿ.ರಮೇಶ್ (35) ಎಂಬವರು ನಿನ್ನೆ ರಾತ್ರಿ ಮನೆಯಲ್ಲಿಯೇ ಸೀರೆಯಿಂದ ಕೊಠಡಿಯ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಇಂದು ಗೊತ್ತಾಗಿದೆ.

ಇಲ್ಲಿನ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರಮೇಶ್ ನಿನ್ನೆ ತಡ ರಾತ್ರಿಯವರೆಗೂ ಮನೆಯ ಮುಂಭಾಗದ ಕೊಠಡಿಯಲ್ಲಿ ಮಧ್ಯ ಸೇವಿಸುತ್ತಿದ್ದರು. ನಂತರ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ತಾನು ಸಾಯುವದಾಗಿ ತಿಳಿಸಿದ್ದರು. ಬೆಳಿಗ್ಗೆ ಈತನ ಸ್ನೇಹಿತ ಬಂದು ಬಾಗಿಲು ತಟ್ಟಿ ರಮೇಶ್‍ನನ್ನು ಕರೆದಾಗ ರಮೇಶ್ ಬಾಗಿಲು ತೆರೆಯದಿರುವದನ್ನು ಕಂಡು ಕಿಟಿಕಿಯಿಂದ ಇಣುಕಿ ನೋಡಿದಾಗ ರಮೇಶ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ನಗರ ಪೊಲೀಸರಿಗೆ ದೂರು ನೀಡಲಾಯಿತು.

ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದವರಾಗಿದ್ದ ರಮೇಶ್ ಪೋಷಕರ ವಿಳಾಸದಲ್ಲಿ ಪೊಲೀಸರು ಮೊಬೈಲ್ ಪತ್ತೆ ಹಚ್ಚಿದಾಗ ಮೃತನ ತಾಯಿ ಹಾಗೂ ತಮ್ಮ ವೀರಾಜಪೇಟೆಗೆ ಬಂದ ನಂತರ ಅವರ ಎದುರಿನಲ್ಲಿಯೇ ಬಾಗಿಲನ್ನು ತೆರೆದು ಮೃತ ದೇಹದ ಮಹಜರು ನಡೆಸಿದರು. ಮುಂದಿನ ಕೊಠಡಿಯ ಟಿ.ವಿ. ಬಳಿಯಲ್ಲಿ ರಮೇಶ್ ಬರೆದಿಟ್ಟ ಡೆತ್‍ನೋಟ್ ಪೊಲೀಸರಿಗೆ ದೊರೆತಿದೆ.

ರಮೇಶ್‍ಗೆ ವಿವಾಹವಾಗಿ ಪತ್ನಿ, ಒಂದು ವರ್ಷದ ಗಂಡು ಮಗು ಇದ್ದು, ಪೊಲೀಸ್‍ಗೆ ದೊರೆತ ಡೆತ್‍ನೋಟ್‍ನ ಪ್ರಕಾರ ರಮೇಶ್ ಭಗ್ನ ಪ್ರೇಮಿಯಾಗಿದ್ದು, ಸೋಮವಾರಪೇಟೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಎರಡು ಮೂರು ದಿನಗಳ ಹಿಂದೆ ರಮೇಶ್ ಸೋಮವಾರಪೇಟೆಗೆ ತೆರಳಿದ್ದಾಗ ಯುವತಿಯ ನಡುವೆ ಗಲಭೆ ಉಂಟಾಗಿದ್ದು, ವಿವಾದ ಪೊಲೀಸ್ ಠಾಣೆ ಮೆಟ್ಟಿಲಿನ ತನಕ ತಲಪಿರುವದಾಗಿ ರಮೇಶನ ಸಂಗಡಿಗರು ಮಾತನಾಡಿಕೊಳ್ಳುತ್ತಿದ್ದರು. ಪ್ರೇಮ ಪ್ರಕರಣದ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ.

ರಮೇಶ್ ಈ ಹಿಂದೆ ಸೋಮವಾರಪೇಟೆಯ ಕಾಫಿ ಮಂಡಳಿಯಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಒಂದು ವರ್ಷದಿಂದ ವೀರಾಜಪೇಟೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. ಒಂದು ತಿಂಗಳ ಹಿಂದೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಭೇಟಿ ಮಾಡಿ ಮಹಜರು ನಡೆಸಿದರು. ನಗರ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಆತ್ಮಹತ್ಯೆಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಜೆ ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

- ಡಿಎಂಆರ್/ಕೆಕೆಎಸ್.