ಮಡಿಕೇರಿ, ಅ. 12: ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರನ್ನು ಅಸ್ಸಾಂನ ಗೌಹಾಟಿಯ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್‍ನ ಕೊಲಿಜಿಯಂ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಜಸ್ಟೀಸ್ ಬೋಪಣ್ಣ ಅವರಿಗಿಂತಲೂ ಹಿರಿಯ ನ್ಯಾಯಾಧೀಶರುಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ ಶ್ರೀಯುತರ ಕಾರ್ಯದಕ್ಷತೆಯನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಈ ತೀರ್ಮಾನ ಕೈಗೊಂಡಿದೆ.ಜಸ್ಟೀಸ್ ಬೋಪಣ್ಣ ಅವರು ಈ ಹುದ್ದೆ ಅಲಂಕರಿಸುತ್ತಿರುವ ಕೊಡವ ಜನಾಂಗದ ಪ್ರಥಮ ವ್ಯಕ್ತಿಯಾಗಿದ್ದು, ಪಾಲಿಬೆಟ್ಟದ ಕೊಡುಗೈ ದಾನಿ, ಕಾಫಿ ಬೆಳೆಗಾರ ದಿವಂಗತ ಅಜ್ಜಿಕುಟ್ಟೀರ ಸೋಮಯ್ಯ ಅವರ ಪುತ್ರರಾಗಿದ್ದಾರೆ.