ಶ್ರೀಮಂಗಲ, ಅ. 13: ಮೈಸೂರಿನಿಂದ ಕೊಡಗಿನ ಮೂಲಕ ಮಂಗಳೂರಿನ ಬಿ.ಸಿ ರೋಡ್‍ವರೆಗೆ ಪ್ರಸ್ತಾವನೆಯಲ್ಲಿರುವ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಕೊಡಗಿನ ಪರಿಸರ ಹಾಗೂ ಭೌಗೋಳಿಕ ಲಕ್ಷಣಕ್ಕೆ ಹಾನಿಕಾರಕವಾಗಿದೆ. ಈ ಯೋಜನೆ ರೂಪುಗೊಂಡರೆ ಜಿಲ್ಲೆಯ ಅನೇಕ ರೈತರು ತಮ್ಮ ಜಾಗ ಕಳೆದುಕೊಳ್ಳುವದಲ್ಲದೆ, ರಸ್ತೆ ಬದಿಯ ಅನೇಕರು ಮನೆ-ಮಠ ಕಳೆದುಕೊಳ್ಳುವದರೊಂದಿಗೆ ಕೊಡಗಿನಲ್ಲಿ ಮತ್ತೊಂದು ಪ್ರಾಕೃತಿಕ ದುರಂತಕ್ಕೆ ಪೀಠಿಕೆ ಮಾಡಿಕೊಡಲಿದೆ ಎಂದು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಅವರು ಪೊನ್ನಂಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಯೋಜನೆಯನ್ನು ತಡೆಗಟ್ಟುವಂತೆ ಕೂಡಲೇ ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ. ನಮ್ಮ ಕಾಳಜಿ ಮತ್ತು ಶಿಫಾರಸ್ಸುಗಳ ವಿವರದೊಂದಿಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.ತಾ. 10 ರಂದು ಕುಶಾಲನಗರದಲ್ಲಿ ಪ್ರಸ್ತಾವನೆಯಲ್ಲಿರುವ ಈ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಅಭಿಪ್ರಾಯ ಸಭೆಯಲ್ಲಿ ಈ ಯೋಜನೆಗೆ ವಿರೋಧವನ್ನು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘ, ಯುನೈಟೆಡ್ ಕೊಡವ ಅರ್ಗನೈಸೇಷನ್‍ನ ಸಂಚಾಲಕ ಮಂಜು ಚಿಣ್ಣಪ್ಪ, ಪ್ರಮುಖ ಕಳ್ಳಿಚಂಡ ರಾಬೀನ್ ಸುಬ್ಬಯ್ಯ, ಜಮ್ಮಡ ಗಣೇಶ್ ಅಯ್ಯಣ್ಣ, ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ, ಅರುಣಾಚಲ ಪ್ರದೇಶ ವಿಶ್ವವಿದ್ಯಾಲಯದ ನಿವೃತ್ತ ಮಾಜಿ ಉಪ ಕುಲಪತಿ ಕೆ.ಸಿ. ಬೆಳ್ಯಪ್ಪ, ಹೊಟೇಲ್ ಮಾಲೀಕರ ಸಂಘದ ಮೋಹನ್ ದಾಸ್ ಮತ್ತಿತರರು
(ಮೊದಲ ಪುಟದಿಂದ) ದಾಖಲಿಸಿದ್ದು, ಜಿಲ್ಲೆಯ ಮೂಲಕ ಈ ಯೋಜನೆಗೆ ಅವಕಾಶವನ್ನು ನೀಡಬಾರದೆಂದು ಒತ್ತಾಯಿಸಿದರು ಎಂದರು.
ಕೊಡಗಿನ ಕುಶಾಲನಗರ, ಸುಂಠಿಕೊಪ್ಪ, ಮಡಿಕೇರಿ ಮೂಲಕ ಹಾದು ಹೋಗುವ ಈ ಹೆದ್ದಾರಿಯು 45 ಮೀಟರ್‍ನಿಂದ 70 ಮೀಟರ್‍ವರೆಗೆ ಅಗಲವಿರುತ್ತದೆ. ಅಂದರೆ ಈಗಿರುವ ರಸ್ತೆಯ 6 ರಿಂದ 10 ಪಟ್ಟು ಹೆಚ್ಚಿರುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಿದರೆ, ಅತೀ ಹೆಚ್ಚು ಮಳೆ ಬೀಳುವ ಜಿಲ್ಲೆಗೆ ಹಾನಿಕಾರಕವಾಗಲಿದೆ.
ಹೆದ್ದಾರಿ ಹಾದು ಹೋಗುವ ಮಡಿಕೇರಿಯ ಕೆಲವು ನಿವಾಸಿಗಳು ತಮ್ಮ ಮನೆಗಳನ್ನು ರಕ್ಷಿಸಲು ಹೆದ್ದಾರಿ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ನಮಗೆ ತಿಳಿದಿದೆ, ಮಡಿಕೇರಿ ಅರಣ್ಯ ಭವನದ ಸಮೀಪದಿಂದ
ಡಿಪೋ ಎಸ್ಟೇಟ್ ಪ್ರದೇಶದಿಂದ ಮೇಲ್‍ಸೇತುವೆ ಮೂಲಕ ಮಂಗಳೂರು ರಸ್ತೆಗೆ ಸಂಪರ್ಕಿಸುವದಾದರೆ ನಮ್ಮ ಮನೆ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗುವದಿಲ್ಲ. ಹೀಗೆ ಮಾಡಿದರೆ ತಾವು ಯೋಜನೆಗೆ ವಿರೋಧಿಸುವದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಮೇಲ್‍ಸೇತುವೆ ಮೂಲಕ ಎತ್ತರಿಸಿದ ಈ ಬೃಹತ್ ಪಿಲ್ಲರ್‍ಗಳನ್ನು ನಿರ್ಮಿಸುವ ಅಗತ್ಯವಿರುತ್ತದೆ. ಈ ಸ್ತಂಭಗಳು ಮಡಿಕೇರಿಯ ಕ್ರಿಷ್ಟಲ್ ಹಾಲ್, ಸರಕಾರಿ ಐಬಿಗಳಲ್ಲಿ ನಿರ್ಮಿಸಲಾಗುತ್ತದೆ.
ಇದರಿಂದ ಇವುಗಳ ನಾಶವಾಗುತ್ತದೆ ಮತ್ತು, ಭೂಕಂಪನ ಅಥವಾ ಇತರ ಅಂಶಗಳ ಕಾರಣದಿಂದಾಗಿ ಸ್ತಂಭಗಳು ದುರ್ಬಲವಾದರೆ ಮಡಿಕೇರಿಗೆ ದೊಡ್ಡ ಮಟ್ಟದ ಅಪಾಯವಿದೆ. ಈ ಮೇಲ್‍ಸೇತುವೆಗಳ ಕೆಳಗೆ ವಾಸಿಸುವ ಮನೆಯವರು ಈ ಅಪಾಯಕಾರಿ ಯೋಜನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಯೋಜನೆಯನ್ನು ವಿರೋಧಿಸುವಂತೆ ಒತ್ತಾಯಿಸುತ್ತೇವೆ ಎಂದರು.