ಕೂಡಿಗೆ, ಅ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದ ಸಮೀಪದ ಸೀಗೆಹೊಸೂರು ಗ್ರಾಮದ ಸರ್ವೆ ನಂ.13/1ರಲ್ಲಿ ಪೈಸಾರಿಯ 282.50 ಎಕರೆ ಜಾಗವಿದ್ದು, 100 ಎಕರೆ ಪ್ರದೇಶವನ್ನು ತೋಟಗಾರಿಕಾ ಇಲಾಖೆಯವರಿಗೆ ನೀಡಲಾಗಿದೆ. ನಾಲ್ಕೈದು ಮಂದಿಗೆ ಆರ್‍ಟಿಸಿ ಆಗಿ ವ್ಯವಸಾಯ ಮಾಡುತ್ತಿದ್ದಾರೆ. ಮಾಜಿ ಸೈನಿಕರಿಗೂ ಕೂಡ ಜಾಗ ಮಂಜೂರಾಗಿದ್ದು, ಸ್ವಲ್ಪ ಮಂದಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಇನ್ನುಳಿದ ಜಾಗವನ್ನು ಸ್ಥಳೀಯ ಗ್ರಾಮಸ್ಥರು ಅಕ್ರಮ-ಸಕ್ರಮ ಸಮಿತಿಗೆ ಫಾರಂ ನಂ.53/50 ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಈ ವ್ಯಾಪ್ತಿಯ 25 ಕ್ಕೂ ಹೆಚ್ಚು ಕುಟುಂಬದವರು ನಿವೇಶನ ರಹಿತ ಮತ್ತು ವಸತಿ ರಹಿತರು ಕೂಡ ಇದ್ದಾರೆ. ಇವರಿಗೆ ಈ ಜಾಗವನ್ನು ಕಾದಿರಿಸಬೇಕಾಗಿ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್, ಸ್ಥಳೀಯ ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪೈಸಾರಿ ಜಾಗವನ್ನು ಸ್ಥಳೀಯರಿಗೆ ಮತ್ತು ಮಾಜಿ ಸೈನಿಕರಿಗೆ ನೀಡಿ ನಂತರ ಉಳಿದ ಜಾಗವನ್ನು ಖಾಸಗಿಯವರಿಗೆ ನೀಡಲು ಮುಂದಾಗಬೇಕೆ ವಿನಃ ಸ್ಥಳೀಯರಿಗೆ ಅನ್ಯಾಯವೆಸಗದಂತೆ ಒತ್ತಾಯಿಸಿದ್ದಾರೆ.
282.50 ಎಕರೆ ಜಾಗವು ಅರಣ್ಯ ಇಲಾಖೆಗೆ ಅಥವಾ ಕಂದಾಯ ಇಲಾಖೆಗೆ ಸೇರಿದ ಜಾಗವಲ್ಲ. ಈ ಜಾಗವನ್ನು ಕಳೆದ 25 ವರ್ಷಗಳ ಹಿಂದೆ ಹೇಮಾವತಿ ಮುಳುಗಡೆ ಪ್ರದೇಶ ಹಾಗೂ ಹಾರಂಗಿ ಮುಳುಗಡೆ ಪ್ರದೇಶದವರಿಗೆ ನೀಡಲು ಕಾದಿರಿಸಿದ್ದ ಪೈಸಾರಿ ಜಾಗ. ಆದರೆ, ಆ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಅವರವರ ಪ್ರದೇಶಗಳಲ್ಲಿಯೇ ಜಾಗವನ್ನು ನೀಡಲಾಗಿದೆ. ಅಂದಿನ ಭೂ ಪ್ರಾಧಿಕಾರ ಸಮಿತಿಯ ಪ್ರಕಾರ ಅನೇಕರಿಗೆ ಜಮೀನುಗಳನ್ನು ನೀಡಲಾಗಿದೆ. ಈ ಭಾಗದಲ್ಲಿ 40 ಕ್ಕೂ ಅಧಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 25 ವರ್ಷಗಳ ಹಿಂದೆಯೇ ಈ ಜಾಗದಲ್ಲಿ ಆಶ್ರಯ ಮನೆ ನೀಡಲು ತೀರ್ಮಾನವೂ ಆಗಿದೆ. ಅದೇ ಮಾದರಿಯಲ್ಲಿ ಈ ಪ್ರದೇಶವು ಪೈಸಾರಿಯಾಗಿದ್ದು, ಈ ವ್ಯಾಪ್ತಿಯ ಜನರಿಗೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಮತ್ತು ಕಂದಾಯ ಇಲಾಖೆಗೆ ಈ ಜಾಗದ ಬಗ್ಗೆ ಸರಿಯಾದ ಸ್ಪಷ್ಟ ಮಾಹಿತಿ ಇಲ್ಲದೆ, ಬೇರೆ ಸರ್ವೆ ನಂಬರ್‍ನ ಜಾಗದ ಬದಲು ಪೈಸಾರಿ ಜಾಗವನ್ನು ಸರ್ವೆ ಮಾಡಲು ಬಂದಿರುವದು ಎಷ್ಟು ಸೂಕ್ತ ಎಂಬದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಈ ಭೂಮಿಯು ಸಂಬಂಧಪಟ್ಟಂತೆ ಕಳೆದ 10 ವರ್ಷಗಳ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಭೂ ನ್ಯಾಯಾಲಯದ ತೀರ್ಮಾನದಂತೆ ಪೈಸಾರಿ ಜಾಗವಾಗಿ ಗುರುತಿಸಿಕೊಂಡಿರುವದರಿಂದ ಇದೀಗ ಅರ್ಜಿ ಸಲ್ಲಿಸಿರುವ ಮಾಜಿ ಸೈನಿಕರಿಗೆ, ವಸತಿ ರಹಿತರಿಗೆ ಮತ್ತು ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಕೃಷಿಕರಿಗೆ ಮೊದಲು ಆದ್ಯತೆ ನೀಡಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳನ್ನು ರಾಜಾರಾವ್, ಗ್ರಾಮಸ್ಥರಾದ ಸತೀಶ್, ಮಂಜುನಾಥ್, ಶಿವಣ್ಣ, ಪ್ರಕಾಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.