ಮಡಿಕೇರಿ, ಅ. 12: ಪ್ರಸಕ್ತ ಮಳೆಗಾಲ ಸಂಭವಿಸಿರುವ ಕೊಡಗಿನ ಪ್ರಾಕೃತಿಕ ಹಾನಿಯೊಂದಿಗೆ, ಭೂಕುಸಿತದ ಬಗ್ಗೆ ರಾಷ್ಟ್ರೀಯ ಭೂಗರ್ಭ ಶಾಸ್ತ್ರ ಇಲಾಖೆಯ ವಿಜ್ಞಾನಿಗಳು ಸಲ್ಲಿಸಿರುವ ವರದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಕೊಡಗಿನ 39 ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಸಂಕಷ್ಟ ನಿವಾರಣೆ ಸಲುವಾಗಿ ಶೀಘ್ರದಲ್ಲಿ ಮುಖ್ಯಮಂತ್ರಿ ಬಳಿ ಬಿಜೆಪಿ ನಿಯೋಗ ತೆರಳಲು ನಿರ್ಧರಿಸಲಾಗಿದೆ. ಇಂದು ನಗರದ ಬಾಲಭವನದಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಗಂಭೀರ ಚರ್ಚೆ ನಡೆಯಿತು.

ಮಡಿಕೇರಿ, ಅ. 12: ಪ್ರಸಕ್ತ ಮಳೆಗಾಲ ಸಂಭವಿಸಿರುವ ಕೊಡಗಿನ ಪ್ರಾಕೃತಿಕ ಹಾನಿಯೊಂದಿಗೆ, ಭೂಕುಸಿತದ ಬಗ್ಗೆ ರಾಷ್ಟ್ರೀಯ ಭೂಗರ್ಭ ಶಾಸ್ತ್ರ ಇಲಾಖೆಯ ವಿಜ್ಞಾನಿಗಳು ಸಲ್ಲಿಸಿರುವ ವರದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಕೊಡಗಿನ 39 ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಸಂಕಷ್ಟ ನಿವಾರಣೆ ಸಲುವಾಗಿ ಶೀಘ್ರದಲ್ಲಿ ಮುಖ್ಯಮಂತ್ರಿ ಬಳಿ ಬಿಜೆಪಿ ನಿಯೋಗ ತೆರಳಲು ನಿರ್ಧರಿಸಲಾಗಿದೆ. ಇಂದು ನಗರದ ಬಾಲಭವನದಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಗಂಭೀರ ಚರ್ಚೆ ನಡೆಯಿತು.

(ಮೊದಲ ಪುಟದಿಂದ) ಹಾಗಾಗಿ ಪ್ರಾಮಾಣಿಕವಾಗಿ ಕೊಡಗಿನ ಸಂಪೂರ್ಣ ಸರ್ವೆ ನಡೆಸಿ ವರದಿ ತಯಾರಿಸಬೇಕು ಎಂದು ಆಗ್ರಹಿಸಿದರು.

ಕೊಡಗು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ನಡೆಯುತ್ತಿದ್ದು, ನೆಮ್ಮದಿಯ ವಾತಾವರಣವೇ ಇಲ್ಲದಂತಾಗಿದೆ. ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಆಡಳಿತ ಇದೆಯೋ ಇಲ್ಲವೋ ಎಂಬಂತಾಗಿದೆ. ಅಷ್ಟೇ ಅಲ್ಲದೆ ಮಂತ್ರಿಗಳ ಹಾಗೂ ಅಧಿಕಾರಿಗಳ ಅಭಿಪ್ರಾಯವೂ ಭಿನ್ನವಾಗಿರುತ್ತದೆ. ಇವೆಲ್ಲವನ್ನೂ ಗಮನಿಸಿದರೆ ಇಂತಹ ಸರ್ಕಾರದಿಂದ ಕಿಂಚಿತ್ತೂ ಪ್ರಯೋಜನವಿಲ್ಲದಿರುವದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ಪ್ರಾಧಿಕಾರ ರಚನೆ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಸುಮಾರು 39 ಗ್ರಾಮಗಳು ಹಾನಿಗೀಡಾಗಿವೆ. ಅದೆಷ್ಟೋ ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹವರಿಗೆ ನೆರವು ನೀಡಲು ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರೇ ದಾನದ ರೂಪದಲ್ಲಿ ನೀಡಿದ್ದಾರೆ. ಶೀಘ್ರದಲ್ಲೇ ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಜಿಲ್ಲೆಯ ಪ್ರಾಧಿಕಾರ ರಚನೆಯ ಬಗ್ಗೆ ಚರ್ಚಿಸಲಾಗುವದು ಎಂದು ತಿಳಿಸಿದರು.

ಈ ಹಿಂದೆ ದಿಡ್ಡಳ್ಳಿ ನಿರಾಶ್ರಿತರಿಗೆ ವಸತಿ ಕಲ್ಪಿಸಿದ ರೀತಿಯಲ್ಲಿ ಚಿಕ್ಕದಾಗಿ ಕಡಿಮೆ ವೆಚ್ಚದ ಮನೆ ನಿರ್ಮಾಣ ಮಾಡಿದಲ್ಲಿ; ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವದು ಎಂದ ಅವರು, ಮುಂದಿನ ಮೇ ಒಳಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೆಲವಿಗೆ ಶ್ರಮಿಸಿ: ಸೋಮವಾರಪೇಟೆ, ಕುಶಾಲನಗರ ಹಾಗೂ ವೀರಾಜಪೇಟೆಯ ಪಟ್ಟಣ ಪಂಚಾಯಿತಿ ಚುನಾವಣೆಯ ದೃಷ್ಠಿಯಿಂದ ತಾಲೂಕು ಪಂಚಾಯ್ತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಒಂದೊಂದು ವಾರ್ಡ್‍ಗಳ ಜವಾಬ್ದಾರಿ ತೆಗೆದುಕೊಳ್ಳಬೇಕು. ಆ ಮೂಲಕ ನಮ್ಮ ಪಕ್ಷದ ಅಧಿಕಾರವನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಬೇಕು. ಮಡಿಕೇರಿ ತಾಲೂಕಿನಲ್ಲಿ 13 ವಿಎಸ್‍ಎಸ್‍ಎನ್‍ಗಳ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅವಕಾಶವಾದಿಗಳ ಬಗ್ಗೆ ಎಚ್ಚರ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಕಾರ್ಯಕರ್ತರು ಪಕ್ಷದ ಆಧಾರ ಸ್ಥಂಭಗಳಿದ್ದಂತೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆ ಎಂಬ ಯುದ್ಧಕ್ಕೆ ಈಗಿನಿಂದಲೇ ತಯಾರಿ ನಡೆಸಿಕೊಳ್ಳಬೇಕು. ಒಗ್ಗಟ್ಟಿನಿಂದ ಮುನ್ನಡೆದರೆ ಗೆಲುವು ಖಚಿತ ಎಂದ ಅವರು, ಕೆಲವೊಂದು ಸಮಸ್ಯೆಗಳು ಎದುರಾದಾಗ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವವರು ಸಮಾಜದಲ್ಲಿದ್ದಾರೆ. ಅಂತಹವರ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಬಿಜೆಪಿ ಹಿರಿಯ ಮುಖಂಡ ಎಂ.ಬಿ ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದರಿಂದ ನಿರಾಶ್ರಿತರಿಗೆ ಮತ್ತೆ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು. ಬಿಪಿಎಲ್ ಕಾರ್ಡುದಾರರಿಗೆ ಮನೆ ನಿರ್ಮಿಸಿಕೊಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಬಡ್ಡಿ ರಹಿತ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯ ನಡುವೆ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು ಹಾಗೂ ಇನ್ನು ಮುಂದೆ ಬಿಜೆಪಿ ಸಭೆಗಳಿಗೆ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಆಕ್ಷೇಪ ವ್ಯಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ ಬೋಪಯ್ಯ ಸಭೆಯ ಕೊನೆಯಲ್ಲಿ ಕಾರ್ಯಕರ್ತರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುವದು ಎಂದು ಸಮಾಧಾನಪಡಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಕೊಡಪಾಲು ಗಣಪತಿ ನಿರಾಶ್ರಿತರ ಪರಿಹಾರ ನಿಧಿಗೆಂದು ರೂ. 10 ಸಾವಿರ ದೇಣಿಗೆಯನ್ನು ಎಂಎಲ್ಸಿ ಸುನೀಲ್ ಸುಬ್ರಮಣಿ ಬಳಿ ನೀಡಿದರು.

ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ ಹರೀಶ್, ತಾ.ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಪ್ರಮುಖರಾದ ಬೆಲ್ಲುಸೋಮಯ್ಯ, ರವಿಬಸಪ್ಪ, ಕಾಳನ ರವಿ, ಕೋಡಿ ಪ್ರಸನ್ನ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.