ಗೋಣಿಕೊಪ್ಪಲು, ಅ.12: ಬಂಡಿಪುರ ಮಾರ್ಗ ತಮಿಳುನಾಡು-ಕೇರಳ ರಾಜ್ಯ ಹೆದ್ದಾರಿ ಹಾಗೂ ಮೈಸೂರು- ಬಾವಲಿ- ಮಾನಂದವಾಡಿ ರಸ್ತೆ ಮಾರ್ಗವನ್ನು ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಿಸಿದಂತೆ ಆನೆಚೌಕೂರು- ವೀರಾಜಪೇಟೆ ಮಾರ್ಗದ ರಸ್ತೆ ಸಂಚಾರದ ಮೇಲೆ ನಿಷೇಧ ಹೇರಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಕಾನೂರು ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಕಾನೂರು ಗ್ರಾ.ಪಂ.ಸದಸ್ಯರಾದ ಕಾಡ್ಯಮಾಡ ಬೋಪಣ್ಣ, ಕೋದಂಡ ನರೇಂದ್ರ ಮುಂತಾದವರು, ಇತ್ತೀಚೆಗೆ ಆನೆಚೌಕೂರು ವ್ಯಾಪ್ತಿಯಲ್ಲಿ ಸಾಕಾನೆ ರಂಗನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಆನೆ ಸಾವನ್ನಪ್ಪಿದ ಪ್ರಕರಣವನ್ನು ಉಲ್ಲೇಖಿಸಿ, ಅರಣ್ಯ ಇಲಾಖಾಧಿಕಾರಿಗಳು ಸಾಕಾನೆಯನ್ನು ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಯಲು ಬಿಟ್ಟಿರುವದು ಇಲಾಖೆಯ ಬೇಜವಾಬ್ದಾರಿಯಾಗಿದೆ.

ದಕ್ಷಿಣ ಕೊಡಗಿನ ಮಾರ್ಗ ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳು, ನಾಪೆÇೀಕ್ಲು, ಶ್ರೀಮಂಗಲ-ಕುಟ್ಟ-ಕಾನೂರು ಗ್ರಾಮಸ್ಥರು, ಕಣ್ಣಾನೂರು, ಕೊಚ್ಚಿನ್, ಕಲ್ಲಿಕೋಟೆ, ತ್ರಿಶೂರು, ಮಾನಂದವಾಡಿ ಮುಂತಾದೆಡೆಗೆ ರಾತ್ರಿ ವೇಳೆಯೇ ಅಧಿಕ ಬಸ್ ಹಾಗೂ ಸರಕು ಸಾಗಾಟ ವಾಹನ ಓಡಾಡುತ್ತಿದ್ದು, ಇದನ್ನು ನಿರ್ಬಂಧಿಸಿದರೆ ಮುಂದೆ ಸಾರ್ವಜನಿಕರು ತೀವ್ರ ಬವಣೆ ಅನುಭವಿಸಬೇಕಾದೀತು. ಮೈಸೂರು- ಬೆಂಗಳೂರು ಆಸ್ಪತ್ರೆಗಳನ್ನೆ ಇಲ್ಲಿನ ರೋಗಿಗಳು, ಅಪಘಾತಗೊಂಡಿರುವ ಗಾಯಾಳುಗಳು ಅತ್ಯಧಿಕವಾಗಿ ಅವಲಂಬಿಸಿದ್ದು ಇಲ್ಲಿನ ಜನಜೀವನದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಸಾಕಾನೆ ಶಿಬಿರ ಮೂರ್ಕಲ್ಲು ಇತ್ಯಾದಿ ಕಡೆಗಳಲ್ಲಿ, ಅರಣ್ಯ ಮಧ್ಯೆ ಭಾಗದಲ್ಲಿ ಇತ್ತು. ಇದೀಗ ಮತ್ತಿಗೋಡು ಸಾಕಾನೆ ಶಿಬಿರ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿಯೇ ಇರುವದರಿಂದ ವನ್ಯಪ್ರಾಣಿ ಹಾಗೂ ಬಸ್ ನಡುವೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆ ಎಸ್‍ಆರ್‍ಎಸ್ ಬಸ್ ಹಾಗೂ ಕಾಡುಕೋಣ ನಡುವೆ ಡಿಕ್ಕಿ ಸಂಭವಿಸಿ ಕಾಡುಕೋಣ ಅಸುನೀಗಿತ್ತು. ಅರಣ್ಯ ಇಲಾಖೆ ಎಚ್ಚೆತ್ತು ಕಾಡಿನ ಬೇಟೆ ಪ್ರಕರಣ ನಿಯಂತ್ರಿಸಲಿ, ವಾಹನದ ವೇಗ ನಿಯಂತ್ರಣಕ್ಕೆ ಅಲ್ಲಲ್ಲಿ ಬೇಕಿದ್ದರೆ ಕಾಡಿನ ಸರಹದ್ದು ಮುಗಿಯುವವರೆಗೂ ಎಚ್ಚರಿಕೆ ಫಲಕ, ರಸ್ತೆ ಉಬ್ಬು ನಿರ್ಮಿಸಲಿ ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.

ರಸ್ತೆಯೂ ಮುಂದೆ ಹುಣಸೂರು- ತಲಕಾವೇರಿ, ಹಾಸನ- ಮಾನಂದವಾಡಿ ದ್ವಿಪಥ ರಸ್ತೆಯಾಗಿಯೂ ಅಭಿವೃದ್ಧಿಗೊಳ್ಳಲಿದ್ದು, ರಾತ್ರಿ ಸಂಚಾರ ನಿಷೇಧ ಹೇರಿದರೆ ತಾಲೂಕಿನ ವಿವಿಧ ಅರಣ್ಯ ಇಲಾಖೆ ಕಚೇರಿ ಮುಂದೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

-ಸುದ್ದಿ ಸಂಸ್ಥೆ-ಗೋಣಿಕೊಪ್ಪಲು