ಗೋಣಿಕೊಪ್ಪ ವರದಿ, ಅ. 13: ಮೂವರು ಸಾಧಕರನ್ನು ಸನ್ಮಾನಿಸುವ ಮೂಲಕ ಗೋಣಿಕೊಪ್ಪ ರೋಟರಿ ಸಂಸ್ಥೆಯು ತನ್ನ ರೋಟರಿ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಿದರು.

ಇಲ್ಲಿನ ಕಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ಗವರ್ನರ್ ಅಧಿಕೃತ ಬೇಟಿ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರೊ. ಡಾ. ರಾಮಕೃಷ್ಣ ಹೆಗ್ಡೆ, ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆ ಶಿಕ್ಷಕ ನೆಲ್ಲಮಾಡ ತಿಮ್ಮಯ್ಯ, ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪ ಸಂದರ್ಭ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಕಲ್ಪಿಸಿಕೊಟ್ಟಿರುವ ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆ ಮುಖ್ಯಸ್ಥ ಕೋಳೇರ ಝರು ಗಣಪತಿ ಅವರನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಯಿತು.

ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಮಾತನಾಡಿ, ರೋಟರಿ ಸಂಸ್ಥೆ ವಿಶ್ವಾಧ್ಯಂತ ಪೋಲಿಯೋ ಮುಕ್ತವನ್ನಾಗಿಸಬೇಕು ಎಂದು ಪಣ ತೊಟ್ಟಿರುವದರಿಂದ ವಿಶ್ವದಲ್ಲಿ ಪೋಲಿಯೋ ರೋಗಿಗಳ ಸಂಖ್ಯೆ ಎರಡಂಕಿಗೆ ಇಳಿಸುವಷ್ಟು ಸಾಧನೆ ಮಾಡಿದಂತಾಗಿದೆ. ನೈಜಿರಿಯಾದಲ್ಲಿ 5, ಪಾಕಿಸ್ತಾನ 4, ಅಪ್ಘಾನಿಸ್ತಾನ 14 ಪ್ರಕರಣಗಳು ಸೇರಿ ವಿಶ್ವದಲ್ಲಿ ಒಟ್ಟು 22 ಪೋಲಿಯೋ ಪ್ರಕರಣಗಳು ದಾಖಲಾಗಿವೆ. ಇದನ್ನು ಒಂದಕಿಗೆ ಇಳಿಸುವ ಪಣ ರೋಟರಿ ಸಂಸ್ಥೆ ತೊಡಗಿಕೊಂಡಿದೆ. ಆದರೆ, ಈ ಮೂರು ದೇಶಗಳಲ್ಲಿ ಉತ್ತಮ ಸ್ಪಂದನೆ ಸಿಗದೆ ಫಲ ಕಾಣದಂತಾಗಿದೆ. ಪೋಲಿಯೋ ಮುಕ್ತ ನಮ್ಮ ಹೋರಾಟಕ್ಕೆ ಉತ್ತಮ ಫಲಿತಾಂಶ ದೊರೆತಿದೆ ಎಂದರು.

ಅಂಗನವಾಡಿಗಳನ್ನು ದತ್ತು ಪಡೆದು ಮಕ್ಕಳಿಗೆ ಬೇಕಾದ ಶುದ್ಧ ಕುಡಿಯುವ ನೀರು, ಆಟಿಕೆ, ಶೌಚಗೃಹ, ಮೂಲಸೌಕರ್ಯದೊಂದಿಗೆ ಪ್ರಾರಂಭಿಕ ಶಿಕ್ಷಣಕ್ಕೆ ಒತ್ತು ಕೊಟ್ಟಿರುವದರಿಂದ ಬಡಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ದೃಷ್ಠಿಯಿಂದ ಹೆಚ್ಚು ಸಹಕಾರಿಯಾಗುತ್ತಿದೆ. ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗನವಾಡಿಗಳನ್ನು ದತ್ತು ಪಡೆಯಲಾಗಿದೆ ಎಂದರು.

ವಲಯ ಲೆಫ್ಟಿನೆಂಟ್ ರೀಟಾ ದೇಚಮ್ಮ ರೋಟರಿ ಬುಲೆಟಿನ್ ಅನಾವರಣಗೊಳಿಸಿದರು. ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗುರುತಿಸಲಾಯಿತು. ಈ ಸಂದರ್ಭ ರೋಟರಿ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ಗೋಣಿಕೊಪ್ಪ ರೋಟರಿ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ, ಕಾರ್ಯದರ್ಶಿ ಮೂಕಳೇರ ಬೀಟಾ, ನಿಕಟಪೂರ್ವ ಕಾರ್ಯದರ್ಶಿ ನೆವಿನ್, ಸಾರ್ಜೆಂಟ್ ಪ್ರಮೋದ್ ಕಾಮತ್, ರೋಟರಿ ಆನ್ಸ್ ಅಧ್ಯಕ್ಷೆ ರಿಸ್ತಾ ಚೆಂಗಪ್ಪ ಉಪಸ್ಥಿತರಿದ್ದರು.