ವೀರಾಜಪೇಟೆ, ಅ. 12: ವೀರಾಜಪೇಟೆ ವಿಭಾಗದಲ್ಲಿ ವಿದ್ಯುತ್ ಸಂಪರ್ಕದ ಯಾವದೇ ಲೋಪದೋಷಗಳಿದ್ದರೆ ಅಧೀಕ್ಷಕರಿಗೆ ಫೋಟೋ ಸಮೇತ ದೂರು ಕೊಡಲು ಅವಕಾಶವಿದೆ. ಗ್ರಾಹಕರು ವ್ಯಾಟ್ಸಪ್ ಮೂಲಕ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ಮೈಸೂರು ವೃತ್ತದ ಸೆಸ್ಕ್ ಅಧೀಕ್ಷಕ ಅಭಿಯಂತರ ಪ್ರತಾಪ್ ಹೇಳಿದರು.
ವೀರಾಜಪೇಟೆಯ ಚೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ಕರೆದಿದ್ದ ಜನ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರತಾಪ್ ವಿದ್ಯುತ್ ಸಂಪರ್ಕಕ್ಕಾಗಿ ತ್ವರಿತಗತಿಯಿಂದ ಕಾರ್ಯ ನಿರ್ವಹಿಸಲು ವೀರಾಜಪೇಟೆ ವಿಭಾಗಕ್ಕೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರಾತಿಯಾಗಿದ್ದು, ಜಾಗದ ಕೊರತೆಯಿಂದ ವಿಳಂಬವಾಗಿದೆ. ಸುಮಾರು ಹತ್ತು ಕಿ.ಮೀ. ವ್ಯಾಪ್ತಿಯೊಳಗಡೆ ಎರಡು ಎಕರೆ ಜಾಗ ದೊರೆತರೆ ಅಗತ್ಯವಾಗಿ ಸಬ್ ಸ್ಟೇಷನ್ ಸ್ಥಾಪಿಸಲಾಗುವದು. ಜಾಗದ ಖರೀದಿಗೂ ಸೆಸ್ಕ್ ಸಿದ್ಧವಿದೆ ಎಂದು ತಿಳಿಸಿದರು.
ವೀರಾಜಪೇಟೆ ಬಳಿಯ ಕಂಡಿಮಕ್ಕಿ ಎಂಬಲ್ಲಿ ಬಾಣೆ ಜಾಗದಲ್ಲಿ ಸುಮಾರು 5 ಅಡಿ ಎತ್ತರದಲ್ಲಿ ವಿದ್ಯುತ್ ಸಂಪರ್ಕದ ತಂತಿ ಜೋತು ಬಿದ್ದು ಒಂದು ವರ್ಷವಾಗಿದೆ. ಅನೇಕ ಬಾರಿ ವೀರಾಜಪೇಟೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಟಿ.ಎನ್. ಮಂಜುನಾಥ್ ಅವರ ಪುಕಾರಿಗೆ ಇನ್ನು ಮುಂದೆ ಈ ರೀತಿ ಲೋಪದೋಷಗಳು ಕಂಡು ಬಂದರೆ ನೇರವಾಗಿ ವ್ಯಾಟ್ಸ್‍ಪ್ ಬಳಸಿ ದೂರು ನೀಡಿ ಎಂದು ಪ್ರತಿಕ್ರಿಯಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಮಾತನಾಡಿ ವಿದ್ಯುತ್ ಸಂಪರ್ಕವನ್ನು ಅಗತ್ಯಕ್ಕನುಸಾರವಾಗಿ ಪ್ರತ್ಯೇಕಗೊಳಿಸಲು ಬಿಟ್ಟಂಗಾಲ ಹಾಗೂ ಆರ್ಜಿ ಗ್ರಾಮದಲ್ಲಿ ಫೀಡರ್ ಅಳವಡಿಸಲಾಗಿದೆಯೆಂದರೂ ಇನ್ನೂ
ಬ್ರೇಕರ್ ಅಳವಡಿಸದಿರುವದರಿಂದ ಇದಕ್ಕೆ ಚಾಲನೆ ನೀಡಿಲ್ಲ. ತಕ್ಷಣ ಕ್ರಮಕ್ಕೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಚೆಸ್ಕಾಂನ ತಾಂತ್ರಿಕ ವಿಭಾಗದ ಸಹಾಯಕ ಅಧಿಕಾರಿ ತಾರಾ ಮಾತನಾಡಿ ಗ್ರಾಹಕರು ಏನೇ ಸಮಸ್ಯೆ ಇದ್ದರೂ ಕಿರಿಯ ಅಧಿಕಾರಿಗಳಿಗೆ ದೂರು ನೀಡಿ ಬಗೆ ಹರಿಯದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವದೇ ಅಧಿಕಾರಿಗಳ ಉದ್ದೇಶವಾಗಿದೆ ಎಂದರು. ವೇದಿಕೆಯಲ್ಲಿ ಮಡಿಕೇರಿಯ ಕಾರ್ಯಪಾಲಕ ಅಬಿಯಂತರ ಸೋಮಶೇಖರ್, ತಾಂತ್ರಿಕ ವಿಭಾಗದ ದೇವಯ್ಯ ಉಪಸ್ಥಿತರಿದ್ದರು.