ಶನಿವಾರಸಂತೆ, ಅ. 12: ಕೊಡ್ಲಿಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ 9 ದಿನಗಳು ನಡೆಯುವ ಶರನ್ನವರಾತ್ರಿ ಶ್ರೀದುರ್ಗಾದೇವಿ ಪೂಜೆಯ ಸೇವಾರಾಧನೆಗೆ ಗುರುವಾರ ಚಾಲನೆ ನೀಡಲಾಯಿತು. ದೇವಿಗೆ ನೂರಾರು ಮಂದಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ಹರೀಶ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ 9 ದಿನಗಳ ಕಾಲ ಶಕ್ತಿ ದೇವತಾರಾಧನೆಯನ್ನು ವಿಜೃಂಭಣೆಯಿಂದ ನಡೆಸಲಾಗುವದು. ಮಹಾಬಲೇಶ್ ಜೋಷಿ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ, ರಾತ್ರಿ ಶ್ರೀದುರ್ಗಾ ಕಲ್ಪೋಕ್ತ ಪೂಜೆ ನಡೆಯಲಿದೆ ಎಂದರು. ನವರಾತ್ರಿಯ ಕೊನೆ ದಿನ ತಾ. 19 ರಂದು ಬೆಳಿಗ್ಗೆ ದುರ್ಗಾ ಕಲಶ ವಿಸರ್ಜನೆ, ಅಪರಾಜಿತಾ ಪೂಜೆ, ಶಮೀಪೂಜೆ, ಕೂಷ್ಮಾಂಡ ಪೂಜೆ ನಡೆಯಲಿವೆ. ರಾತ್ರಿ ಮಂಗಳವಾದ್ಯದೊಂದಿಗೆ ದೀಪಾಲಂಕೃತ ಮಂಟಪದಲ್ಲಿ ದುರ್ಗಾ ದೇವಿಯ ಉತ್ಸವ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ದೇವಾಲಯ ವತಿಯಿಂದ ಪ್ರತಿದಿನವೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.