ಮಡಿಕೇರಿ, ಅ. 13: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಬಡವರಿಗೆ ಸರಕಾರದಿಂದ ಮಾನವೀಯ ನೆಲೆಯಲ್ಲಿ ಆಸರೆ ಕಲ್ಪಿಸಬೇಕೆಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
ಪರಿಷತ್ತಿನ ಮಾಜೀ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಅ.ಭಾ. ಅಧ್ಯಕ್ಷ ಬಸವರಾಜ್ ಸಾದರ್ ಹಾಗೂ ತಂಡ ಇಲ್ಲಿನ ಪೊಲೀಸ್ ಮೈತ್ರಿಭವನದ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವದರೊಂದಿಗೆ, ಸುದ್ದಿಗಾರರೊಂದಿಗೆ ಮಾನಾಡಿದರು.
ಇಂದು ಎಲ್ಲವನ್ನು ಕಳೆದುಕೊಂಡು ಆಸರೆಯಿಲ್ಲದಿರುವ ಬಡವರಿಗೆ ಸರಕಾರ ಮಾನವೀಯ ನೆಲೆಯಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರಲ್ಲದೆ, ಪರಿಷತ್ತಿನಿಂದ ನೋಡಲ್ ಅಧಿಕಾರಿ ಮೂಲಕ ರೂ. 1.05 ಲಕ್ಷ ದೇಣಿಗೆಯನ್ನು ಮುಖ್ಯಮಂತ್ರಿಗಳ ಕೊಡಗು ಸಂತ್ರಸ್ತರ ನಿಧಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್, ಪದಾಧಿಕಾರಿಗಳಾದ ಮಹದೇವಪ್ಪ, ಎಸ್.ಎಸ್. ಸುರೇಶ, ಡಿ.ಬಿ. ಸೋಮಪ್ಪ, ಪುಟ್ಟರಾಜ್, ಮೃತ್ಯುಂಜಯ ಮೊದಲಾದವರು ಹಾಜರಿದ್ದರು.