ಸುಂಟಿಕೊಪ್ಪ, ಅ. 13: ಪ್ರತಿಷ್ಠಿತ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಜೆ.ಡಿ.ಎಸ್. ದೋಸ್ತಿ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಆಗಸ್ಟ್ 19 ರಂದು ನಡೆಯಬೇಕಾದ ಚುನಾವಣೆ ಅತಿವೃಷ್ಟಿಯಿಂದಾಗಿ ತಾ. 16 ರಂದು ನಡೆಯಲಿದೆ. 2 ದಶಕಗಳಿಂದಲೂ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಿಜೆಪಿ ವಶದಲ್ಲಿರುವ ಸಂಘವನ್ನು ಕಸಿದುಕೊಳ್ಳಲು ಜೆಡಿಸ್ ಕಾಂಗ್ರೆಸ್ ಮುಂಖಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ತಂತ್ರ ಹಣಿಯುತ್ತಿದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಸಂಘದ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರು ಆಗಿರುವದರಿಂದ ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರುವ ಧಾವಂತವಿದೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿ.ಜೆ.ಪಿ.ಯಿಂದ ಮಾಜಿ ಅಧ್ಯಕ್ಷ ಬಿ.ಎ. ಮೊಣ್ಣಪ್ಪ, ಮಾಜಿ ಉಪಾಧ್ಯಕ್ಷ ಪಿ.ಪಿ. ತಿಲಕ್‍ಕುಮಾರ್, ಗ್ರಾ.ಪಂ. ಸದಸ್ಯ ಉಮೇಶ ಉತ್ತಪ್ಪ ಎನ್.ಎಂ., ಕರುಂಬಯ್ಯ ಬಿ.ಎ., ಕಾಳಪ್ಪ ಎನ್.ಸಿ.(ಸಚ್ಚಿ), ಎನ್.ಎಸ್. ಬೆಳ್ಯಪ್ಪ, ಸ್ಪರ್ಧಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಿಂದ ಬೋಪಯ್ಯ ಕೆ.ಬಿ. (ದಾದು), ಎಂ.ಕೆ. ಜಗದೀಶ, ಮಾಜಿ ನಿರ್ದೇಶಕ ಸಿ.ಎ. ತಮ್ಮಯ್ಯ, ಎನ್.ಟಿ. ಗಣಪತಿ, ಟಿ.ಸಿ. ನೇತ್ರಾಜು ಹಾಗೂ ಮಾದಪ್ಪ ರಘು ಸ್ಪರ್ಧಾ ಕಣದಲ್ಲಿದ್ದಾರೆ.

ಸಾಲಗಾರಲ್ಲದ 1 ಕ್ಷೇತ್ರದಿಂದ ಬಿಜೆಪಿಯಿಂದ ಎಂ.ವೈ. ಕೇಶವ ಹಾಗೂ ಕಾಂಗ್ರೆಸ್‍ನಿಂದ ಎನ್.ಎಂ. ಬಿದ್ದಣ್ಣಿ (ಮಧು) ಸಾಲಗಾರರ ಹಿಂದುಳಿದ ಪ್ರವರ್ಗ ‘ಎ’ ಕ್ಷೇತ್ರದ 1 ಸ್ಥಾನಕ್ಕೆ ಬಿಜೆಪಿಯಿಂದ ಬಿ.ಎ. ಧೂಮಪ್ಪ, ದೋಸ್ತಿ ಪಕ್ಷದಿಂದ ಎಂ.ಬಿ. ರಾಜ ಹಾಗೂ ಪಕ್ಷೇತರರಾಗಿ ಗ್ರಾ.ಪಂ. ಸದಸ್ಯ ಕೆ.ಎ. ಲತೀಫ್ ಸಾಲಗಾರರ ಮಹಿಳಾ 1 ಮಿಸಲು ಕ್ಷೇತ್ರದಿಂದ ಬಿಜೆಪಿಯಿಂದ ಪಿ. ಪೊನ್ನವ್ವ (ಜೂಲಿ), ಕಾಂಗ್ರೆಸ್‍ನಿಂದ ಪಿ.ಐ. ನಳಿನಿ ಹಾಗೂ ಎಂ.ಬಿ. ಗೀತಾ, ಪರಿಶಿಷ್ಟ ಜಾತಿಯಿಂದ ರೇಣುಕ ಹಾಗೂ ಜೆ.ಆರ್. ಕೃಷ್ಣಪ್ಪ ಕಣದಲ್ಲಿದ್ದಾರೆ.

ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ಈ ಸಹಕಾರ ಸಂಘದ ಚುನಾವಣೆಯಲ್ಲಿ ಯಾರ ಪಾಲಿಗೆ ವಿಜಯಮಾಲೆ ಒಲಿದು ಬರಲಿದೆಯೋ ಎಂದು ಕಾದು ನೋಡಬೇಕಾಗಿದೆ.