ಮಡಿಕೇರಿ, ಅ. 16: ಮಡಿಕೇರಿ ದಸರಾ ಕವಿಗೋಷ್ಠಿ ಅನುದಾನ ರಹಿತವಾಗಿ ನಡೆದ ಹಿನ್ನೆಲೆಯಲ್ಲಿ ಬಂದವರು ತಣ್ಣೀರು ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡುವದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಸರಕಾರ ರೂ. 50 ಲಕ್ಷ ಗಳನ್ನು ನೀಡಿದ್ದರೂ ಕೂಡ ಅದ್ಧೂರಿ ಬೇಡ ಎಂಬ ಕಾರಣಕ್ಕೆ ಕವಿಗೋಷ್ಠಿಯನ್ನು ಏಕಾಏಕಿಯಾಗಿ ರದ್ದು ಮಾಡಿದ ದಸರಾ ಸಮಿತಿಯ ಕ್ರಮವನ್ನು ಪ್ರತಿಭಟಿಸಿ ಅನುದಾನ ರಹಿತವಾಗಿ ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಮಡಿಕೇರಿ, ಅ. 16: ಮಡಿಕೇರಿ ದಸರಾ ಕವಿಗೋಷ್ಠಿ ಅನುದಾನ ರಹಿತವಾಗಿ ನಡೆದ ಹಿನ್ನೆಲೆಯಲ್ಲಿ ಬಂದವರು ತಣ್ಣೀರು ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡುವದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಸರಕಾರ ರೂ. 50 ಲಕ್ಷ ಗಳನ್ನು ನೀಡಿದ್ದರೂ ಕೂಡ ಅದ್ಧೂರಿ ಬೇಡ ಎಂಬ ಕಾರಣಕ್ಕೆ ಕವಿಗೋಷ್ಠಿಯನ್ನು ಏಕಾಏಕಿಯಾಗಿ ರದ್ದು ಮಾಡಿದ ದಸರಾ ಸಮಿತಿಯ ಕ್ರಮವನ್ನು ಪ್ರತಿಭಟಿಸಿ ಅನುದಾನ ರಹಿತವಾಗಿ ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಸಂಖ್ಯೆಯಲ್ಲಿ ಕವಿಗಳು ಸಾಹಿತ್ಯಾಸಕ್ತರು ಆಗಮಿಸಿದ್ದರು. ಕವಿಗೋಷ್ಠಿ ಕಾರ್ಯಕ್ರಮವನ್ನು ಕವಿ ಹಾಗೂ ಸಂತ್ರಸ್ತ ಕುಡೆಕಲ್ ಸಂತೋಷ್ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಸಂತ್ರಸ್ತ ನಾಗೇಶ್ ಕಾಲೂರು, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಸೀರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ ಅವರೊಂದಿಗೆ ತಣ್ಣೀರು ಕುಡಿಯುವದರೊಂದಿಗೆ ಉದ್ಘಾಟಿಸಿದರು. ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ ಅವರುಗಳು ಕೆಲಕಾಲ ಪ್ರೇಕ್ಷಕರ ಆಸನಗಳಲ್ಲಿ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು. ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಕವಿಗಳೊಂದಿಗೆ ಹಾಜರಿದ್ದರು.
(ಮೊದಲ ಪುಟದಿಂದ) ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಕವಿಗೋಷ್ಠಿಯ ಉದ್ದೇಶದ ಬಗ್ಗೆ ಮಾತನಾಡಿ, ಇದು ಕವಿಗೋಷ್ಠಿಯಲ್ಲ, ಹಾದಿ ತಪ್ಪುತ್ತಿರುವ ದಸರಾ ವ್ಯವಸ್ಥೆ ವಿರುದ್ಧ ನಮ್ಮ ಉಪವಾಸ ಸತ್ಯಾಗ್ರಹ ಎಂದು ಹೇಳಿದರು.
ಅನುದಾನ ನೀಡದಿರುವದಕ್ಕೆ ನಮ್ಮ ಪ್ರತಿಭಟನೆಯಲ್ಲ. ಅದ್ಧೂರಿ ಬೇಡ ಎಂಬ ಕಾರಣಕ್ಕೆ ಕವಿಗೋಷ್ಠಿಯನ್ನು ರದ್ದು ಮಾಡಿರುವದಕ್ಕೆ ನಮ್ಮ ಆಕ್ಷೇಪ. ಕವಿಗೋಷ್ಠಿ ಅದ್ಧೂರಿ ಅಲ್ಲ ಎನ್ನುವದನ್ನು ತೋರಿಸಿಕೊಡಬೇಕಿತ್ತು. ನೆರೆ, ಬರ ಅಥವಾ ಯಾವದೇ ಸಂದರ್ಭದಲ್ಲಿ ಸಾಹಿತ್ಯ ಎನ್ನುವದು ನೊಂದವರ ಧ್ವನಿಯಾಗಿ ನಿಂತಿದೆ. ಅವರಿಗೆ ಸಾಂತ್ವನ ಹೇಳಿದೆ. ಈ ಹಿಂದಿನಿಂದಲೂ ಸಾಹಿತ್ಯ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಸಮಾಜವನ್ನು ಕಟ್ಟುವ ಕಾಯಕಯೋಗಿಯ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದೆ ಕವಿಗೋಷ್ಠಿಯನ್ನೇ ರದ್ದು ಮಾಡಿರುವದು ಖಂಡನೀಯ. ಈ ಹಿನ್ನೆಲೆಯಲ್ಲಿ ಯಾರಿಂದಲೂ ಹಣ ಸಂಗ್ರಹಿಸದೆ, ಕೇವಲ ತಣ್ಣೀರನ್ನೇ ಉಡುಗೊರೆಯಾಗಿ ನೀಡಿ ಕವಿಗೋಷ್ಠಿಯನ್ನು ನಡೆಸಿದ್ದು, ನಿರೀಕ್ಷೆಗೆ ಮೀರಿ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು. ಅಲ್ಲದೆ ಇಂದಿನ ಕವನವಾಚನಗಳು ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಚಿತ್ರಣದ ಪ್ರತಿಬಿಂಬವಾಗಿ ಹೊರಹೊಮ್ಮಿದೆ ಎಂದು ತಮ್ಮ ಕವನವನ್ನು ವಾಚಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಡೆಕಲ್ ಸಂತೋಷ್ ಮಾತನಾಡಿ, ಸಾಹಿತ್ಯ ಎನ್ನುವದು ಹೊಟ್ಟೆ ತುಂಬಿದಾಗ ಮೂಡುವದಿಲ್ಲ. ಹಸಿವಿನಲ್ಲಿದ್ದಾಗ, ನೋವಿನಲ್ಲಿದ್ದಾಗ ಅದ್ಭುತವಾದ ಕಾವ್ಯಗಳು ಜನಿಸುತ್ತವೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ದಸರಾ ಅನುದಾನ ನೀಡದೆ ಕವಿಗೋಷ್ಠಿಯನ್ನೇ ರದ್ದು ಮಾಡಿರುವದರ ವಿರುದ್ಧ ನಮ್ಮ ಪ್ರತಿಭಟನೆ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಸರಳ ಅಂದರೆ ಏನು ಎನ್ನುವ ಸ್ಪಷ್ಟನೆಯನ್ನು ದಸರಾ ಸಮಿತಿ ನೀಡಬೇಕಿದೆ. ದಸರಾ ಎನ್ನುವದು ಜನಸ್ತೋಮದ ಹಬ್ಬವಾಗಬೇಕು. ಆದರೆ, ಸರಕಾರ ಹಣ ನೀಡಿದರೂ ಕೂಡ ಇಂತಹ ಕಾರ್ಯಕ್ರಮ ಬೇಡ ಎಂದವರಿಗೆ ನನ್ನ ಧಿಕ್ಕಾರವಿದೆ. ಅನುದಾನ ಇಲ್ಲದೆಯೂ ಇಂತಹ ಕಾರ್ಯಕ್ರಮ ನಡೆಸಬಹುದು ಎನ್ನುವದನ್ನು ಕವಿಗೋಷ್ಠಿ ಉಪಸಮಿತಿ ತೋರಿಸಿಕೊಟ್ಟಿದೆ. ಇನ್ನಾದರೂ ದಸರಾ ಸಮಿತಿ ತನ್ನ ತಪ್ಪನ್ನು ತಿದ್ದಿಕೊಳ್ಳಲಿ ಎಂದರು.
ಕಳೆದ ವರ್ಷ ಹತ್ತು ಲಕ್ಷ ರೂ.ಗಳನ್ನು ಯಾವ ಕಾರಣಕ್ಕೆ ಉಳಿಸಿಕೊಂಡಿದೆ ಎನ್ನುವದು ತಿಳಿಯುತ್ತಿಲ್ಲ. ಸಂಗ್ರಹಿಸಿದ ಹಣವೆಲ್ಲ ಯಾವ ಖಾತೆಗೆ ಹೋಗಿದೆ ಎನ್ನುವದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ ಅವರು ಇಂದು ಇಲ್ಲಿ ನಾವು ಕುಡಿದ ತಣ್ಣೀರು ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡುವ ಪ್ರತಿಜ್ಞೆಯಾಗಬೇಕು ಎಂದು ಹೇಳಿದರು. ಇಲ್ಲಿ ತನಕದ ದಸರಾ ಸಭೆಗೆ ಪತ್ರಕರ್ತರ ಸಂಘದ ಅಧ್ಯಕ್ಷರನ್ನು ಕರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ನಿರ್ಣಯವನ್ನು ಆನಂದ್ ಕೊಡಗು ಮಂಡಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಸೀರ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಉದಯ ಮೊಣ್ಣಪ್ಪ, ಮನೋಜ್, ಮಂಜು ಅವರುಗಳು ಅತಿಥಿ ಪರಿಚಯ ಮಾಡಿದರು. ಕಿಶೋರ್ ರೈ ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ವಂದನಾರ್ಪಣೆ ಮಾಡಿದರು.