ವರದಿ-ಚಂದ್ರಮೋಹನ್
ಕುಶಾಲನಗರ, ಅ. 22 : ಕುಶಾಲನಗರದಿಂದ ಕಳೆದ ಎರಡೂವರೆ ವರ್ಷಗಳ ಹಿಂದೆ ಉದ್ಯಮಿಯೊಬ್ಬರು ನಿಗೂಢವಾಗಿ ಕಣ್ಮರೆಯಾಗಿದ್ದು ಇದುವರೆಗೆ ಪತ್ತೆಯಾಗದಿರುವದು ಸ್ಥಳೀಯ ನಾಗರಿಕ ವಲಯದಲ್ಲಿ ಆತಂಕ ಮೂಡಿಸಿದೆ. ಮನೆಯಿಂದ ಹೊರಹೋದ ತಮ್ಮ ಪತಿಯ ಸುಳಿವು ದೊರೆಯದಿರುವ ಪತ್ನಿ ನಾಪತ್ತೆಯಾಗಿರುವ ಪತಿಯ ಹುಡುಕಾಟದಲ್ಲಿ ತೊಡಗಿದ್ದು ದಿನನಿತ್ಯ ಬರುವ ನಿರೀಕ್ಷೆಯಲ್ಲಿ ದಿನಗಳೆಯುತ್ತಿದ್ದಾರೆ.
ಕುಶಾಲನಗರದ ಮಾರ್ಕೆಟ್ ರಸ್ತೆ ಬಳಿಯ ನಿವಾಸಿ ಉದ್ಯಮಿ ಎಂ.ಕೆ.ಪ್ರಭು (56) ಕುಶಾಲನಗರ ಬಸ್ ನಿಲ್ದಾಣದ ಸಮೀಪದಲ್ಲಿ ತಮ್ಮ ದ್ವಿಚಕ್ರ ವಾಹನ ಇರಿಸಿ ನಾಪತ್ತೆಯಾದ ಪ್ರಕರಣ ಇನ್ನೂ ಬಯಲಾಗದಿರುವದು ಆಶ್ಚರ್ಯ ತಂದಿದೆ.
ಮೂಲತಃ ಮುಳ್ಳುಸೋಗೆ ಪಂಚಾಯ್ತಿ ವ್ಯಾಪ್ತಿಯ ನಿವಾಸಿಯಾಗಿರುವ ಎಂ.ಕೆ. ಪ್ರಭು ಸ್ಥಿತಿವಂತರಾಗಿದ್ದು ತಮ್ಮ ಮನೆಯ ಕಟ್ಟಡ ಕಾಮಗಾರಿ ನಡೆಸಲು ಕೆಲಸದವರನ್ನು ಕರೆತರುವದಾಗಿ ಮನೆಯಲ್ಲಿ ಹೇಳಿ ಹೋದವರು ಕಾಣೆಯಾಗಿದ್ದಾರೆ ಎಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ 2016 ರ ಮೇ 9 ರಂದು ದೂರು ದಾಖಲಾಗಿದೆ. ನಂತರ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಪತ್ರಿಕೆಗಳಲ್ಲಿ ಕೂಡ ಜಾಹಿರಾತು ನೀಡುವ ಮೂಲಕ ಪ್ರಕಟಣೆ ಕೂಡ ಹೊರಡಿಸಲಾಗಿತ್ತು.
ರಾಜಕೀಯ ಧುರೀಣರೂ ಆಗಿದ್ದ ಪ್ರಭು ಕುಶಾಲನಗರ ವಿಎಸ್‍ಎಸ್‍ಎನ್ ಬ್ಯಾಂಕ್‍ನ ನಿರ್ದೇಶಕರೂ ಆಗಿದ್ದರು. ಮುಳ್ಳುಸೋಗೆ ಮಂಡಲ ಪಂಚಾಯ್ತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಸುತ್ತಮುತ್ತ ವ್ಯಾಪ್ತಿಯಲ್ಲಿ ಜನಾನುರಾಗಿಯಾಗಿದ್ದು ತನ್ನ ಪತ್ನಿ ಮತ್ತು ಓರ್ವ ಪುತ್ರನೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಮುಳ್ಳುಸೋಗೆ ಮುಖ್ಯರಸ್ತೆ ಬದಿಯಲ್ಲಿ ಬೃಹತ್ ಬಂಗಲೆಯೊಂದನ್ನು ನಿರ್ಮಿಸುತ್ತಿದ್ದ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗಾಗಿ ಬೆಳಿಗ್ಗೆ 6 ಗಂಟೆಗೆ ತನ್ನ ದ್ವಿಚಕ್ರ ವಾಹನ (ಕೆಎ.12.ಇ.5219) ದಲ್ಲಿ ಕುಶಾಲನಗರ ಪಟ್ಟಣಕ್ಕೆ ತೆರಳಿದ್ದ ಪ್ರಭು ಅವರ ಬೈಕ್ ಪಟ್ಟಣದ ಹೃದಯ ಭಾಗದ ಗಣಪತಿ ದೇವಾಲಯ ಬಳಿ ಅನಾಥವಾಗಿ ಪತ್ತೆಯಾಗಿತ್ತು.ಅಂದು ಪ್ರಭು ಅವರು ಬೆಳಗಿನ ಸಮಯದಲ್ಲಿ ಮುಳ್ಳುಸೋಗೆ ವ್ಯಾಪ್ತಿಗೆ ತೆರಳಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು.
ಪ್ರಭು ಅವರು ವ್ಯಾವಹಾರಿಕವಾಗಿ ಸ್ಥಿತಿವಂತರಾಗಿದ್ದು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಕೀರ್ಣ ಒಂದರಿಂದ ಮಾಸಿಕ ಸಾವಿರಾರು ರೂಪಾಯಿ ಹಣ ಬಾಡಿಗೆ ರೂಪದಲ್ಲಿ ಆದಾಯ ಬರುತ್ತಿತ್ತು. ಇನ್ನೊಂದೆಡೆ ಲಕ್ಷಾಂತರ ರೂಪಾಯಿ ಮೊತ್ತದ ನಗದು ಕೈಸಾಲ ಕೂಡ ನೀಡಿದ್ದರು ಎನ್ನುವ ಮಾಹಿತಿ ಕೂಡ ಹೊರಬಿದ್ದಿದೆ. ಮನೆಯಿಂದ ಹೊರಡುವ ಸಂದರ್ಭ ಯಾವದೇ ರೀತಿಯ ಪೂರ್ವ ತಯಾರಿ ಇಲ್ಲದೆ ಹೋಗಿರುವದು ನಂತರದ ವಿಚಾರಣೆಗಳಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭು ಅವರಿಗೆ ಸೇರಿದ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡುಗಳು ತಮ್ಮ ಮೊಬೈಲ್ ಫೋನ್‍ಗಳನ್ನು ಕೂಡ ಮನೆಯಲ್ಲೇ ಬಿಟ್ಟು ತೆರಳಿರುವದು ಈ ಪ್ರಕರಣದ ವಿಶೇಷವಾಗಿದೆ. ಈ ಬಗ್ಗೆ ‘ಶಕ್ತಿ’ ಅವರ ಪತ್ನಿ ನಾಗರತ್ನ ಅವರೊಂದಿಗೆ ಸಂಪರ್ಕಿಸಿ ಪ್ರತಿಕ್ರಿಯೆ ಬಯಸಿದಾಗ ಅವರು ಹೇಳಿದ್ದಿಷ್ಟು. ‘ಕಣ್ಮರೆಯಾದ ಹಿಂದಿನ ದಿನ ಹೆಬ್ಬಾಲೆಯಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ಎಲ್ಲರೂ ತೆರಳಿದ್ದೆವು. ಮರುದಿನ ಬೆಳಿಗ್ಗೆ ಮನೆಯಿಂದ ಹೇಳಿಹೋದ ಪತಿ ನಂತರ ಕಣ್ಮರೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. ಅಲ್ಲದೆ ಹಲವಾರು ಕಡೆ ಹುಡುಕಾಟ ನಡೆಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪತಿಯ ಬಗ್ಗೆ ಮಾಹಿತಿ ಪ್ರಕಟಿಸಿ ಪತ್ತೆಗೆ ಸಹಕಾರ ಕೋರಲಾಯಿತು. ಆದರೆ ಯಾವದೇ ರೀತಿಯ ಪ್ರಯೋಜನ ಕಂಡುಬಂದಿಲ’್ಲ.
ಮನೆಯಲ್ಲಿ ತಮ್ಮ ಪತಿ ಅನ್ಯೋನ್ಯರಾಗಿದ್ದು ಯಾವದೇ ರೀತಿಯ ಕಲಹಗಳು ನಡೆದಿಲ್ಲ ಎಂದು ತಿಳಿಸಿದ ನಾಗರತ್ನ ಅವರು, ಹಲವು ಕಡೆ ಜ್ಯೋತಿಷರು ಹಾಗೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದ್ದರೂ ಇನ್ನೂ ತಮ್ಮ ಪತಿ ಬರದಿರುವ ಬಗ್ಗೆ ತಮ್ಮ ವೇದನೆಯನ್ನು ಹೊರಹಾಕಿದರು. ಜ್ಯೋತಿಷಿಗಳ ಪ್ರಕಾರ ತಮ್ಮ ಪತಿ ಇನ್ನೂ ಯಾವದೇ ಅನಾಹುತವಾಗದೆ ಕ್ಷೇಮವಾಗಿದ್ದಾರೆ. ಯಾವದೋ ಒತ್ತಡದಲ್ಲಿ ಸಿಲುಕಿ ಬಾಹ್ಯ ಪ್ರಪಂಚಕ್ಕೆ ಬರಲಾಗುತ್ತಿಲ್ಲ ಎನ್ನುವ ಅಂಶ ತಿಳಿದುಬಂದಿದೆ. ದಿನನಿತ್ಯ ಅವರ ಸುಳಿವಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ.
ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಅವರ ಪ್ರಕಾರ ಘಟನೆಯ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಆದರೆ ಇದುವರೆಗೂ ಅವರ ಸುಳಿವು ಪತ್ತೆಯಾಗಿಲ್ಲ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಈ ನಡುವೆ ಕಣ್ಮರೆಯಾದ ಪ್ರಭು ಅವರಿಂದ ಭಾರೀ ಮೊತ್ತದ ನಗದು ಕೈಸಾಲ ಪಡೆದ ಹಲವರು ಹಣವನ್ನು ಅವರ ಪತ್ನಿಗೆ ಹಿಂತಿರುಗಿಸಿರುವ ಬಗ್ಗೆಯೂ ಮಾಹಿತಿಗಳು ಲಭಿಸಿವೆ. ಕಣ್ಮರೆಯಾಗಿರುವ ಪ್ರಭು ಅವರ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡವೊಂದನ್ನು ರಚಿಸಿ ಪತ್ತೆ ಕಾರ್ಯ ನಡೆಸಬೇಕೆಂದು ಪ್ರಭು ಅವರ ಆತ್ಮೀಯರಾದ ವಿ.ಪಿ.ಸುಖೇಶ್ ಮನವಿ ಮಾಡಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತೆ ಕಾರ್ಯೋನ್ಮುಖವಾಗಿ ನಾಪತ್ತೆಯಾಗಿರುವ ಉದ್ಯಮಿಯೊಬ್ಬರ ಪತ್ತೆ ಕಾರ್ಯ ನಡೆಸಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬ ಸದಸ್ಯರ ನೋವಿಗೆ ಸ್ಪಂದಿಸಬೇಕಾಗಿದೆ.