ಮಡಿಕೇರಿ, ಅ. 22: ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಲೀಂನನ್ನು ಕೇಂದ್ರ ತನಿಖಾ ದಳ ಪೊಲೀಸರು ತಾ. 23 ರಂದು (ಇಂದು) ಬೆಂಗಳೂರಿನ ಎಸಿಎಂಎಂ 1ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ನಿನ್ನೆ ಕೇರಳದ ಕೂತುಪರಂಬು, ಕಣ್ಣೂರು, ಪಿನರಾಯ್ ಮುಂತಾದೆಡೆಗಳಲ್ಲಿ ಬಂಧಿತ ಆರೋಪಿಯ ವಿಚಾರಣೆ ನಡೆಸಿರುವ ತನಿಖಾ ತಂಡ, ಆತ ಶಂಕಿತ ಉಗ್ರಗಾಮಿ ಚಟುವಟಿಕೆ ಸಂಬಂಧ ತರಬೇತಿ ನೀಡಿರುವ ಮಾಹಿತಿ ಕಲೆ ಹಾಕಿದ್ದಾರೆ.ತನಿಖಾ ತಂಡದ ಪ್ರಕಾರ ಸಲೀಂ ಕರಾಟೆ ಕೂಡ ಕಲಿತ್ತಿದ್ದು, ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ಹೊಂದಿದವ ನಾಗಿದ್ದಾನೆ. ನಿಷೇಧಿತ ಸಿಮಿ ಸಂಘಟನೆಯಲ್ಲಿ ಸಕ್ರಿಯನಾಗಿರುವ ಈತ ಬಹಳಷ್ಟು ಸಂದರ್ಭ ಕೇರಳ ಪೊಲೀಸರು ಬಂಧಿಸಲು ಮುಂದಾಗಿದ್ದ ವೇಳೆ ಪೊಲೀಸರ ಮೇಲೆ ದೈಹಿಕ ಹಲ್ಲೆಯೊಂದಿಗೆ ತಪ್ಪಿಸಿಕೊಂಡಿದ್ದ ಆರೋಪಿಯಾಗಿದ್ದಾನೆ.
ಕಳೆದ ತಾ. 10 ರಂದು ಬೆಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಆ ಮುಖಾಂತರ ಹದಿಮೂರು ದಿನಗಳ ತನಕ ಪೊಲೀಸ್ ಕಸ್ಟಡಿಗೆ ಹೆಚ್ಚಿನ ವಿಚಾರಣೆಗಾಗಿ ಪಡೆದುಕೊಂಡಿದ್ದಾಗಿ ಉನ್ನತ ಮೂಲಗಳಿಂದ ಗೊತ್ತಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಶಕದ ಹಿಂದೆ ಸರಣಿ ಸ್ಫೋಟ ಸಂಭವಿಸಿದ್ದ ಸ್ಥಳಗಳಲ್ಲಿ ಕೂಡ ಆರೋಪಿಯನ್ನು ಖುದ್ದು ಕರೆದೊಯ್ದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಅಲ್ಲಲ್ಲಿ ಮಹಜರು ಸಹಿತ ಪಂಚನಾಮೆ ಪಡೆಯಲು ಕಾನೂನು ಕ್ರಮ ವಹಿಸಲಾಗಿದೆ.
ಇಂತಹ ದೇಶದ್ರೋಹ ಆಪಾದನೆಗೆ ಒಳಗಾದವರನ್ನು ಬೆಂಗಳೂರು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ವಿಧಿವಿಜ್ಞಾನ ಪ್ರಯೋಗಾಲಯದ ವಿಶೇಷ ಬಂಧಿಖಾನೆಯಲ್ಲಿರಿಸಿ ಹೆಚ್ಚಿನ ತನಿಖೆಯೊಂದಿಗೆ ಗೌಪ್ಯತೆ ಕಾಪಾಡಿಕೊಳ್ಳಲು ಕ್ರಮವಹಿಸಲಾಗುತ್ತದೆ ಎಂದು ಮೂಲ ಗಳಿಂದ ಮಾಹಿತಿ ಲಭಿಸಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ತಾ. 23 ರಂದು (ಇಂದು) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಸಲೀಂ ಬಂಧನದೊಂದಿಗೆ ತನಿಖೆಯ ನೇತೃತ್ವ ವಹಿಸಿರುವ ಡಿಸಿಪಿ ಸುಬ್ರಮಣ್ಯ ಖಾತರಿಪಡಿಸಿದ್ದಾರೆ.
ಅಲ್ಲದೆ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ರಾಷ್ಟ್ರದ್ರೋಹದಂತಹ ಗಂಭೀರ ಪ್ರಕರಣಗಳ ಆಪಾದನೆ ಎದುರಿಸುವವರಿಗೆ ಪ್ರತ್ಯೇಕ ಬಿಗಿಭದ್ರತಾ ಕೋಣೆಗಳಲ್ಲಿ ಸೆರೆವಾಸ ಕಲ್ಪಿಸಲಾಗುತ್ತದೆ ಎಂದು ಅಲ್ಲಿನ ಮೂಲಗಳು ‘ಶಕ್ತಿ’ಗೆ ಸುಳಿವು ನೀಡಿವೆ.