ಮಡಿಕೇರಿ, ಅ. 22: ಇಲ್ಲಿನ ಕೈಗಾರಿಕಾ ಬಡಾವಣೆ ಬಳಿಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಕಣ್ಣನ್ (52) ಎಂಬಾತ ತೋಟಗಾರಿಕಾ ಕಟ್ಟಡ ಹಿಂಭಾಗದ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಕಿಗೆ ಬಂದಿದೆ.ಈ ಬಗ್ಗೆ ಸ್ಥಳೀಯರು ನೀಡಿದ ಸುಳಿವಿನ ಮೇರೆಗೆ ನಗರ ಠಾಣೆ ಪೊಲೀಸರು, ನಗರಸಭಾ ಸಿಬ್ಬಂದಿಯ ಸಹಕಾರದಿಂದ ಶವ ಹೊರ ತೆಗೆಸಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.ಕೇರಳ ಮೂಲದ ಮೃತ ಕಣ್ಣನ್ ಪತ್ನಿ, ಮಕ್ಕಳನ್ನು ತೊರೆದು ಕೂಲಿ ಮಾಡಿಕೊಂಡು ಜೀವಿಸುತ್ತಿದ್ದುದಾಗಿ ತಿಳಿದು ಬಂದಿದೆ. ಆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರಸಭಾ ಸಿಬ್ಬಂದಿಯ ಸಹಕಾರದಿಂದ ತಾ. 23 ರಂದು (ಇಂದು) ಮರಣೋತ್ತರ ಪರೀಕ್ಷೆ ಬಳಿಕ ಮೃತನ ಅಂತ್ಯ ಸಂಸ್ಕಾರ ನಡೆಯಲಿದೆ.ದೇಶ ಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಅವರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ನಗರಸಭಾ ಸಿಬ್ಬಂದಿ ಶವವನ್ನು ಮೇಲೆತ್ತಿ ಸಾಗಾಟಕ್ಕೆ ನೆರವಾದರು. ನಗರ ಠಾಣಾಧಿಕಾರಿ ಷಣ್ಮುಗ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು ಮಹಜರು ನಡೆಸಿದರು.

ಬಾವಿ ಇದ್ದ ವಾಣಿಜ್ಯ ಜಾಗದಲ್ಲಿ ವ್ಯಾಪಾರ ನಡೆಸುತ್ತಿರುವ ಶರ್ಮಾ ಅವರ ದೂರನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.