ಕೂಡಿಗೆ, ಅ. 22 : ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರ ಸಂಕೀರ್ಣದ ಹೆಚ್ಚುವರಿ ಕಟ್ಟಡಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ರಾಷ್ಟ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಶಿವಪ್ರಸಾದ್ ಉದ್ಘಾಟಿಸಿದರು. ಅವರು ಮಾತನಾಡಿ, ಕೊಡಗು ಜಿಲ್ಲೆಯ ಚಿಕ್ಕಅಳುವಾರದಲ್ಲಿನ ಸ್ನಾತಕೋತ್ತರ ಕೇಂದ್ರವು ರಮಣೀಯವಾದ ಸ್ಥಳವಾಗಿದೆ. ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಲು ಸೂಕ್ತವಾದ ವಾತಾವರಣವೂ ಇದೆ. ಯುವಕರು ಇದನ್ನು ಬಳಸಿಕೊಂಡು ತಮ್ಮ ಮನೋಸ್ಥೈರ್ಯದ ಮೂಲಕ ಎಲ್ಲಾ ವಿಷಯಗಳ ಬಗ್ಗೆ ಸಂಶೋಧನೆ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ವಿಜ್ಞಾನ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳು ಹಾಗೂ ಆದಿಚುಂಚನ ಗಿರಿ ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೋ.ಕೆ.ಭೈರಪ್ಪ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರವು 70 ವಿದ್ಯಾರ್ಥಿಗಳಿಂದ ಪ್ರಾರಂಭ ಗೊಂಡು 700ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಕೇಂದ್ರ ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಾ, ಜಿಲ್ಲೆಯ ಮತ್ತು ಹೊರಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂಗಳೂರು ವಿಶ್ವವಿದ್ಯಾ ನಿಲಯದ ಪ್ರಭಾರ ಕುಲಸಚಿವ ಪ್ರೋ. ಕಿಶೋರ್‍ಕುಮಾರ್ ಸಿ.ಕೆ. ವಹಿಸಿದ್ದರು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ಅಧಿಕಾರಿ ಪ್ರೋ. ರವೀಂದ್ರಚಾರಿ, ಆಡಳಿತ ವಿಭಾಗಾಧಿಕಾರಿ ದಯಾನಂದ್ ನಾಯಕ್, ಜ್ಞಾನಕಾವೇರಿ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕಿ ಪ್ರೋ.ಮಂಜುಳಾ ಶಾಂತರಾಮ್, ಪರೀಕ್ಷಾಂಗ ಶಾಖೆಯ ಪ್ರೋ.ಎ.ಎಂ.ಖಾನ್ ಇದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ನಿರ್ವಹಿಸಿದರು.