ಮಡಿಕೇರಿ, ಅ. 22: ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರದಿಂದ ನಿರ್ಮಾಣಗೊಂಡಿರುವ ನೂತನ ಕೊಠಡಿ ತಾ.29 ರಂದು ಉದ್ಘಾಟನೆಗೊಳ್ಳಲಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಎಂ.ಶೋಭಾ ಸುಬ್ಬಯ್ಯ ಅವರು ಹಳೆಯ ವಿದ್ಯಾರ್ಥಿಗಳು ಕಾಲೇಜ್‍ನ ಅಭ್ಯುದಯಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನೂತನ ಕೊಠಡಿಯನ್ನು ಬೆಳೆಗಾರರಾದ ಬೋಜಮ್ಮ ಪೂಣಚ್ಚ ಉದ್ಘಾಟಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕಿಶೋರ್ ಕುಮಾರ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಅವರು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಅವರು ನಿವೃತ್ತಿ ಹೊಂದುತ್ತಿರುವದರಿಂದ ಬೀಳ್ಕೊಡುಗೆ ಕಾರ್ಯಕ್ರಮ ಅಂದೇ ನಡೆಯಲಿದೆ ಎಂದು ಶೋಭಾ ಸುಬ್ಬಯ್ಯ ತಿಳಿಸಿದರು.
ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ವಿಜ್ಞಾನಿಯಾಗಿರುವ ಮೂಡೆರ ಜಗದೀಶ್ ಅವರು ಈ ಕೊಠಡಿ ನಿರ್ಮಿಸುವದಕ್ಕಾಗಿ ಐದು ಲಕ್ಷ ರೂ. ನೀಡಿದ್ದು, ಉಳಿದ ಮೂರು ಲಕ್ಷ ರೂ.ಗಳನ್ನು ಇತರ ದಾನಿಗಳಿಂದ ಸ್ವೀಕರಿಸಲಾಗಿದೆ ಎಂದರು.
ಸಂಘ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗಿದೆ.
ವನ ಮಹೋತ್ಸವದ ಅಂಗವಾಗಿ ಎರಡು ವರ್ಷಗಳ ಹಿಂದೆ ಕಾಲೇಜಿನ ಆವರಣದಲ್ಲಿ ಔಷಧೀಯ ಸಸಿಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲಾಗುತ್ತಿದೆ. ಮತ್ತೊಂದೆಡೆ ಸ್ಪಲ್ಪ ಜಾಗವನ್ನು ಪಡೆದು ಅಲ್ಲಿ ನೂರರಷ್ಟು ಮರಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ.
ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಪತ್ರಿಕೋದ್ಯಮದ ಬಗ್ಗೆ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ನಡೆಸಿ ಪತ್ರಕರ್ತರಿಂದ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ ಮತ್ತು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನಗಳನ್ನು ಸಂಘದ ವತಿಯಿಂದ ನೀಡಲಾಗಿದೆ.
ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಗೆ ಹನ್ನೆರಡು ಕುರ್ಚಿಗಳು ಮತ್ತು ಎರಡು ಮೇಜುಗಳನ್ನು ಹಾಗೂ ಪ್ರಾಂಶುಪಾಲರ ಕೊಠಡಿಗೆ ಒಂದು ಸೋಫಾವನ್ನು ಕಳೆದ ವರ್ಷ ನೀಡಲಾಗಿದೆ.
ಇದೆಲ್ಲಾ ಸಾಧ್ಯವಾದದ್ದು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಹಕಾರದಿಂದ ಎಂದು ಶೋಭಾ ಸುಬ್ಬಯ್ಯ ಹೆಮ್ಮೆ ವ್ಯಕ್ತಪಡಿಸಿದರು ಇನ್ನು ಮುಂದೆಯೂ ಹಳೆಯ ವಿದ್ಯಾರ್ಥಿಗಳು ತಮ್ಮ ಗುರು ದಕ್ಷಿಣೆಯನ್ನು ಕಾಲೇಜಿನ ಅಭ್ಯುದಯಕ್ಕಾಗಿ ನೀಡಿ ಸಹಕರಿಸಬೇಕೆಂದು ಅವರು ಇದೇ ಸಂದರ್ಭ ಮನವಿ ಮಾಡಿದರು.
ಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಂದಿನೆರವಂಡ ಅಪ್ಪಯ್ಯ, ಕಾರ್ಯದರ್ಶಿ ಶ್ಯಾಂ ಪೂಣಚ್ಚ, ಪದಾಧಿಕಾರಿಗಳಾದ ವಿಜು ನಂಜಪ್ಪ ಮತ್ತು ತಾರಾ ಮುದ್ದಯ್ಯ ಉಪಸ್ಥಿತರಿದ್ದರು.
.