ವೀರಾಜಪೇಟೆ, ಅ. 23: ಜಾತ್ಯತೀತ ಮನೋಭಾವನೆವುಳ್ಳ ಜನತೆಯ ಸಮಸ್ಯೆಗಳಿಗೆ ನೇರವಾಗಿ ನಿರಂತರವಾಗಿ ಸ್ಪಂದಿಸುವ ಕಳಂಕ ರಹಿತ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಿ ಪಟ್ಟಣ ಪಂಚಾಯಿತಿಯಲ್ಲಿ ಅವಕಾಶ ಕಲ್ಪಿಸುವದರೊಂದಿಗೆ ನಿಷ್ಪಕ್ಷಪಾತವಾದ ಪಾರದರ್ಶಕ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಪಟ್ಟಣ ಪಂಚಾಯಿತಿಗೆ ಇಲ್ಲಿನ ಗಾಂಧಿನಗರದ ಹದಿನೈದನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿ.ಎ. ಮಂಜುನಾಥ್ ಪರ ಪ್ರಚಾರ ಕೈಗೊಂಡು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು ನಾಗರಿಕರಿಗೆ ಪಟ್ಟಣ ಪಂಚಾಯಿತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.
ಪ್ರತಿನಿಧಿಗಳು ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವದರೊಂದಿಗೆ ಜನತೆಯ ಅಗತ್ಯ ಬೇಡಿಕೆಗಳನ್ನು ಈಡೇರಿಸಬೇಕು ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಜಾತ್ಯತೀತ ಮನೋಭಾವದ ಸಿದ್ಧಾಂತದಲ್ಲೂ ಎರಡು ಪಕ್ಷಗಳಲ್ಲಿ ಒಂದೇ ಆಗಿದೆ.
ಈ ಬಾರಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಜೆ.ಡಿ.ಎಸ್.ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೆ.ಡಿ.ಎಸ್. ಪಕ್ಷವನ್ನು ಬೆಂಬಲಿಸುವಂತೆ ಮತದಾರರನ್ನು ಕೋರಿದರು.
ಇದೇ ಸಂದರ್ಭ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮರಿಯಾ ಸಿಕ್ವೇರಾ, ಅಮ್ಮಂಡ ವಿವೇಕ್, ಚಿಲ್ಲವಂಡ ಗಣಪತಿ, ರಾಖೇಶ್ ಬಿದ್ದಪ್ಪ ಟಿ.ಎಂ. ಯೋಗೀಶ್ ನಾಯ್ಡು, ನಿತಿನ್, ಶಾಂತ, ಸುಮಿತ್ರ ಮತ್ತಿತರರು ಹಾಜರಿದ್ದರು.