ಮಡಿಕೇರಿ, ಅ. 23: ಬಿ.ಎಸ್.ಎನ್.ಎಲ್. ಗುತ್ತಿಗೆ ಆಧಾರಿತ 250 ಮಂದಿ ಕಾರ್ಮಿಕರಿಗೆ ವೇತನ ಪಾವತಿ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘದಿಂದ ನಿನ್ನೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಹಲವಾರು ವರ್ಷಗಳಿಂದ ಬಿ.ಎಸ್.ಎನ್.ಎಲ್. ಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಗ್ರ್ಯಾಚುವಿಟಿ ಬೋನಸ್, ಪಿ.ಎಫ್., ಇ.ಎಸ್.ಐ., ಗುರುತಿನ ಚೀಟಿ ಮತ್ತು ಭದ್ರತೆಯ ಬಗ್ಗೆ ಸಂಸ್ಥೆಯೊಂದಿಗೆ ಪತ್ರದ ಮೂಲಕ ನೇರವಾಗಿ ಸಂಪರ್ಕಿಸಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ಸಂದರ್ಭ ಸಂಘಟನೆಯ ಸಹ ಕಾರ್ಯದರ್ಶಿ ರಮೇಶ್ ಮಾತನಾಡಿ, ದೇಶ ಮುಂದುವರೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಹಿಂದೆ ಇದ್ದಾರೆ. ನಮಗೆ ಕಳೆದ ಮೂರು ತಿಂಗಳೂ ವೇತನ ಪಾವತಿಯಾಗಿಲ್ಲ. ಇದನ್ನು ಪರಿಹರಿಸುವಲ್ಲಿ ಯಾವದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವೇತನ ಪಾವತಿಯಾಗುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವದು ಎಂದು ಹೇಳಿದರು.

ಪ್ರತಿಭಟನೆಯ ಸಂದರ್ಭ ಬಿ.ಎಸ್.ಎನ್.ಎಲ್. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ವಿ.ಜೆ. ಅಂಥೋಣಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಪ್ರಕಾಶ್, ಬ್ರಾಂಚ್

ಕಾರ್ಯದರ್ಶಿ ಟಿ.ಕೆ. ಕವಿತಾ, ಕಾರ್ಯದರ್ಶಿ ರವಿ, ಸಿ.ಐ.ಟಿ.ಯು. ಮುಖಂಡ ರಮೇಶ್ ಮತ್ತಿತರರು ಹಾಜರಿದ್ದರು.