ಕೂಡಿಗೆ, ಅ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದ ಸೀಗೆಹೊಸೂರು ಕಾರ್ಯಕ್ಷೇತ್ರದಲ್ಲಿರುವ ಮಹಿಳಾ ಜ್ಞಾನ ವಿಕಾಸ ಸಂಘಗಳ ಸದಸ್ಯರಿಗೆ ಒಂದು ದಿನದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಮಹಿಳಾ ಜ್ಞಾನವಿಕಾಸ ಸಂಯೋಜಕಿ ಪದ್ಮಾವತಿ ಮಾತನಾಡಿ, ಮಹಿಳೆಯರ ಜ್ಞಾನಾಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೆಚ್ಚು ಒತ್ತು ನೀಡುತ್ತಿದೆ. ಪ್ರತೀ ವರ್ಷಕೊಂದು ಬಾರಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯವಾಗಿ ಗುರುತಿಸಲ್ಪಡುತ್ತಿರುವ ಕಾರ್ಯಕ್ರಮಗಳ ಹಾಗೂ ಸಂಘ-ಸಂಸ್ಥೆಗಳ ಪರಿಚಯವನ್ನು ಸದಸ್ಯರಲ್ಲಿ ಮೂಡಿಸುವ ಉದ್ದೇಶದಿಂದ ನ್ಯಾಯಾಲಯ, ಪೆÇಲೀಸ್ ಠಾಣೆ, ಕೂಡಿಗೆ ಹಾಲಿನ ಡೈರಿಗಳಿಗೆ ಹಾಗೂ ಸ್ವ ಉದ್ಯೋಗಕ್ಕೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿರುವ ಹೈನುಗಾರಿಕೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿಸಿ ಸದಸ್ಯರಿಗೆ ಮಾಹಿತಿ ಒದಗಿಸಲಾಗುವದು ಎಂದರು. ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸೇವಾ ಪ್ರತಿನಿಧಿ ಸುನಂದ ಸದಸ್ಯರನ್ನು ಸಂಘಟಿಸುವಲ್ಲಿ ಸಹಕರಿಸಿದರು. ಈ ಒಂದು ದಿನದ ಅಧ್ಯಯನ ಪ್ರವಾಸದಲ್ಲಿ ಸೀಗೆಹೊಸೂರು ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.