ಗೋಣಿಕೊಪ್ಪ ವರದಿ, ಅ. 23: ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪ ಸಂದರ್ಭದ 50 ಸಂತ್ರಸ್ತರಿಗೆ ರೋಟರಿ ವತಿಯಿಂದ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಲಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಹೇಳಿದರು.

ಜಿಲ್ಲಾಡಳಿತ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಟ್ಟರೆ 50 ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲಾಗುವದು. ಈ ಬಗ್ಗೆ ರೋಟರಿ ಸಂಸ್ಥೆ ವಿಶ್ವಮಟ್ಟದಲ್ಲಿ ರೋಟರಿ ಸಂಸ್ಥೆಯ ಅನುದಾನ ಕ್ರೋಡೀಕರಣಕ್ಕೆ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಡಳಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಒದಗಿಸಿದರೆ ಸುಮಾರು ರೂ. 9 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಿ ಕೊಡುವ ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ನಿರ್ಮಿಸುವ ಮನೆಗಳೊಂದಿಗೆ ರೋಟರಿ ಪಾಲು ನೀಡುವ ಉದ್ದೇಶ ಹೊಂದಿಲ್ಲ. ರೋಟರಿ ತನ್ನದೇ ಆದ ಚಿಂತನೆಯಲ್ಲಿ ಮನೆ ನಿರ್ಮಿಸಲಿದೆ. ರೋಟರಿ ಕೂಡ ಪ್ರತ್ಯೇಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಶೇಷ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ಇದು ರೋಟರಿ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಮನೆ ನಿರ್ಮಾಣಕ್ಕಾಗಿ ರೋಟರಿಯು ವಿಶ್ವ ಮಟ್ಟದಲ್ಲಿ ಗ್ಲೋಬಲ್ ಅನುದಾನ ಬಳಕೆ ಮಾಡಲು ನಿರ್ಧರಿಸಿದೆ. ಕೇರಳದ 3 ಜಿಲ್ಲೆ ಸೇರಿದಂತೆ ಕೊಡಗಿನಲ್ಲಿ ಮನೆ ನಿರ್ಮಿಸಲಿದೆ. ಯೋಜನೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಕೊಡಗಿನ ರೋಟರಿ ಪ್ರಮುಖರುಗಳಾದ ಡಾ. ರವಿ ಅಪ್ಪಾಜಿ ಸಮಿತಿ ಮುಖ್ಯಸ್ಥರಾಗಿದ್ದಾರೆ. ಇವರೊಂದಿಗೆ ಸುರೇಶ್ ಚೆಂಗಪ್ಪ, ಡಾ. ನಾಗಾರ್ಜುನ್ ಹಾಗೂ ತಂಡ ಕಾರ್ಯೋನ್ಮುಖವಾಗಿದೆ.

ಅಂಗನವಾಡಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಅಂಗನವಾಡಿ ದತ್ತು ಪಡೆಯುವ ಯೋಜನೆ ಹೆಚ್ಚು ಜನಪ್ರಿಯವಾಗುತ್ತಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸ್ವಚ್ಚತೆ, ಆರೋಗ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ದತ್ತು ಪಡೆದು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ವಿಶ್ವಮಟ್ಟದಲ್ಲಿ ಪೋಲಿಯೋ ಮುಕ್ತ ಅಭಿಯಾನ ಯಶಸ್ವಿ ಪಡೆದುಕೊಂಡಿದೆ. ಪೋಲಿಯೋ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಕಾರ್ಯೋ ನ್ಮುಖವಾಗಿದ್ದು, ನೈಜೀರಿಯಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದಿಂದ ಉತ್ತಮ ಬೆಂಬಲ ದೊರಕುತ್ತಿಲ್ಲ. ಈ ಕಾರಣಕ್ಕಾಗಿ ವಿಶ್ವದಲ್ಲಿ 22 ಪ್ರಕರಣಗಳು ದಾಖಲಾಗಿವೆ. ಇದನ್ನು ಸಿಂಗಲ್ ಡಿಜಿಟ್‍ಗೆ ಇಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಉಪರಾಜ್ಯಪಾಲ ಧರ್ಮಪುರಿ ನಾರಾಯಣ, ವಲಯ ಕಾರ್ಯದರ್ಶಿ ಕೃಷ್ಠಾಲ್ ಕ್ವೆಟ್, ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚೆಂಗಪ್ಪ, ಕಾರ್ಯದರ್ಶಿ ಬೀಟಾ ಉಪಸ್ಥಿತರಿದ್ದರು.