ಆಲೂರು-ಸಿದ್ದಾಪುರ, ಅ. 23: ಆಲೂರು-ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಮಸಗೋಡು ಗ್ರಾಮದ ಮಹಿಳಾ ಸಮಾಜದಲ್ಲಿ ಕೊನೆಗೊಂಡಿತು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬೇಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಂದಣ್ಣ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆಯುವ ಶಿಬಿರದಲ್ಲಿ ಕಲಿತುಕೊಂಡ ವಿಚಾರವನ್ನು ಜೀವನದ ಉದ್ದಗಲಕ್ಕೂ ಪಾಲಿಸಬೇಕೆಂದರು. ರಾಷ್ಟ್ರೀಯ ಸೇವಾ ಯೋಜನೆಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳು ಜೀವನಕ್ಕೆ ಬೇಕಾಗುವ ಪಾಠವನ್ನು ಕಲಿತುಕೊಳ್ಳಬಹುದು. ಸಮಾಜ ಮುಖೇನ ಹಾಗೂ ನಾಯಕತ್ವದ ಹೊಣೆಗಾರಿಕೆಗೂ ರಾಷ್ಟ್ರೀಯ ಸೇವೆ ಯೋಜನೆ ಪಾಲ್ಗೊಳ್ಳುವಿಕೆ ಪರಿಪೂರ್ಣ ವೇದಿಕೆಯಾಗುತ್ತದೆ ಎಂದರು.

ಉಸ್ತುವಾರಿ ಸಮಿತಿ ಅಧ್ಯಕ್ಷ ಅಧ್ಯಕ್ಷ ಎಂ.ಟಿ. ಲೋಕೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ನಡೆಯಲ್ಪಡುತ್ತದೆ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಗ್ರಾಮಸ್ಥರ ಮನಸಿನಲ್ಲಿ ಸದಾ ನೆನಪಿಸುವಂತಹ ಶ್ರಮದಾನ ಮತ್ತು ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕೆಂದರು. ಗ್ರಾಮಗಳಲ್ಲಿ ಹಮ್ಮಿಕೊಳ್ಳುವ ರಾಷ್ಟ್ರೀಯ ಸೇವಾ ಶಿಬಿರದ ಯಶಸ್ವಿಗೆ ಗ್ರಾಮಸ್ಥರ ಮತ್ತು ಸಂಘ-ಸಂಸ್ಥೆಗಳ ಸಹಕಾರ ಪ್ರೋತ್ಸಾಹವೂ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಶಿಬಿರ ಯಶಸ್ಸುಗೊಂಡಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾ.ಪಂ. ಸದಸ್ಯ ಎಂ.ಟಿ. ಭುವನ್ ಬೋಪಯ್ಯ ಮಾತನಾಡಿದರು. ಸಮಾರಂಭದಲ್ಲಿ ಮಸಗೋಡು ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಡಿ. ಗಣೇಶ್, ಕಾಲೇಜು ಉಪನ್ಯಾಸಕ ಜಿ.ಕೆ. ಯೋಗೇಶ್, ಚಂದ್ರಶೇಖರ್, ಶಿಬಿರಾಧಿಕಾರಿ ಹೆಚ್.ಪಿ. ಶಿವಕುಮಾರ್ ಮುಂತಾದವರಿದ್ದರು.