ಮಡಿಕೇರಿ, ಅ. 23: ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಬಳಿಯಿರುವ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ 22ನೇ ವಾರ್ಷಿಕೋತ್ಸವ ಹಾಗೂ ಜನನಿ ಪ್ರತಿಷ್ಠಾನದ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 21 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಸೇವಾ ಕಾರ್ಯಗಳು ಶ್ಲಾಘನೀಯ ಎಂದರು.
ಮಹಿಳೆಯರು ಸಂಘ-ಸಮಾಜದಂತಹ ಚಟುವಟಿಕೆಗಳಿಂದ ಉಳಿತಾಯದ ಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ, ಸ್ವಾವಲಂಬಿ ಜೀವನ ನಡೆಸುವಂತಾಗಬೇಕೆಂದು ಹೇಳಿದರು. ಇಂದು ದೇಶದಾದ್ಯಂತ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಇಂತಹ ಸಂಘಗಳ ಕಾರ್ಯಚಟುವಟಿಕೆಗಳು ದೇಶದ ಆರ್ಥಿಕ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ ಎಂದು ಹೇಳಿದರು.
ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜ ಹಾಗೂ ಜನನಿ ಪ್ರತಿಷ್ಠಾನದಿಂದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅವರನ್ನು ಹಾಗೂ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಲಲಿತಾ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಖಜಾಂಚಿ ಕಾವೇರಮ್ಮ ಅವರಿಂದ ಪ್ರಾರ್ಥನೆ, ಗ್ರೀಷ್ಮಾ ಜ್ಯೋತಿ ಸ್ವಾಗತ, ಕಾರ್ಯದರ್ಶಿ ಅನಿತಾ ತಾರಾಮಣಿ ನಿರೂಪಣೆ, ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಜನನಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷೆ ರಾಣಿ ಅರುಣ್ ವಂದನಾರ್ಪಣೆ ಮಾಡಿದರು. ವಾರ್ಷಿಕೋತ್ಸವ ಸಮಾರಂಭದಲ್ಲಿ ಜನನಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಅರುಣ, ಮಹಿಳಾ ಸಮಾಜದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿ ರಾಷ್ಟ್ರಗೀತೆ ಹಾಡುವದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.