ವೀರಾಜಪೇಟೆ, ಅ. 23: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸ್ಪರ್ಧಿಸಿರುವ 55 ಮಂದಿ ಅಭ್ಯರ್ಥಿಗಳು ಚುನಾವಣಾ ವೆಚ್ಚವನ್ನು ಎರಡು ದಿನಗಳಿಗೊಮ್ಮೆ ತಪ್ಪದೆ ಚುನಾವಣೆಯ ಲೆಕ್ಕ ವೆಚ್ಚ ವಿಭಾಗದ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಿ ದಾಖಲೆಯನ್ನು ಪಡೆಯಬೇಕು. ಇಲ್ಲದಿದ್ದರೆ ಇಂತಹ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ರಾಜ್ಯ ಚುನಾವಣಾ ಆಯೋಗದ ಲೆಕ್ಕಪತ್ರ ವೆಚ್ಚ ವಿಭಾಗದ ಅಧಿಕಾರಿ ಸುಶೀಲ ಹೇಳಿದರು.
ವೀರಾಜಪೇಟೆಯ ಪುರಭವನದಲ್ಲಿ ಕರೆದಿದ್ದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸುಶೀಲ ಅವರು ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ರೂ ಒಂದು ಲಕ್ಷದ ಮಿತಿಯೊಳಗೆ ವೆಚ್ಚ ಮಾಡಬಹುದು. ಯಾವದೇ ವೆಚ್ಚಕ್ಕೂ ಅಧಿಕೃತ ಬಿಲ್‍ಗಳಿರಬೇಕು. ಅಭ್ಯರ್ಥಿ ಬಳಿ ಲೆಕ್ಕದ ವೆಚ್ಚ ಕಳೆದು ಉಳಿದ ನಗದು ಹಣವನ್ನು ಅಭ್ಯರ್ಥಿ ಇಟ್ಟುಕೊಳ್ಳಲು ಅವಕಾಶವಿದೆ. ಮಿತಿಗಿಂತಲೂ ಅಧಿಕವಿರುವ ಹಣವನ್ನು ಸಹಾಯಕ ಚುನಾವಣಾಧಿಕಾರಿ ವಶ ಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವರು ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸಹಾಯಕ ಚುನಾವಣಾಧಿಕಾರಿ ಚಾಲ್ರ್ಸ್ ಡಿಸೋಜಾ ಮಾತನಾಡಿ, ಅಭ್ಯರ್ಥಿಗಳು ಕೊನೆಯ ಹಂತದಲ್ಲಿಯೂ ಲೆಕ್ಕ ಪತ್ರ ಸಲ್ಲಿಸದೆ ಒಂದು ತಿಂಗಳ ಅವಧಿ ಮುಗಿದಾಗ ಅಂತಹ ಅಭ್ಯರ್ಥಿಗಳಿಗೆ ನೋಟೀಸ್ ಜಾರಿ ಮಾಡಲಾಗುವದು. ಅದರಲ್ಲೂ ಸಮಜಾಯಿಷಿಕೆ ಸರಿಯಾಗದಿದ್ದರೆ ಕಾನೂನು ಕ್ರಮ ಜರುಗಿಸಿ ಅಭ್ಯರ್ಥಿ ಗೆದ್ದು ಬಂದಿದ್ದರೂ ಅನರ್ಹಗೊಳಿಸುವ ಕಾನೂನು ಬದ್ಧವಾದ ನಿಯಮವನ್ನು ಚುನಾವಣಾಧಿಕಾರಿಗಳು ಪಾಲಿಸಲಿದ್ದಾರೆ. ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಲೆಕ್ಕ ಪತ್ರ ವೆಚ್ಚದ ವಿವರವನ್ನು ಸಲ್ಲಿಸುವದು ಒಳಿತು ಎಂದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿಗೆ ಸ್ಪರ್ಧಿಸಿದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಾಜರಿದ್ದರು.
ವೇದಿಕೆಯಲ್ಲಿ ಸಹಾಯಕ ಚುನಾವಣಾ ವಿಭಾಗದ ಸಹಾಯಕ ಅಧಿಕಾರಿಗಳಾದ ಶಿವರಾಜ್, ಗಣೇಶ್, ರಮೇಶ್ ಉಪಸ್ಥಿತರಿದ್ದರು.