ಮಡಿಕೇರಿ, ಅ. 23: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಅವದಿ ಮುಗಿದಿರುವ ವಿವಿಧ ಕೃಷಿಪತ್ತಿನ ಸಹಕಾರ ಸಂಘಗಳು, ಧವಸ ಭಂಡಾರಗಳು, ಮಹಿಳಾ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ ಈ ಸಂಸ್ಥೆಗಳ ಮುಂದಿನ ಆಡಳಿತ ಮಂಡಳಿಯ ಚುನಾವಣೆಗಳ ಭರಾಟೆ ಕಂಡು ಬರುತ್ತಿದೆ. ಇದು ಒಂದೆಡೆಯಾದರೆ ಜಿಲ್ಲೆಯಲ್ಲಿ ಅವದಿಪೂರ್ಣಗೊಂಡಿರುವ ಮೂರು ಪಟ್ಟಣ ಪಂಚಾಯಿತಿಗಳಿಗೂ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಸಂಚಲನವೇ ಕಂಡು ಬರುತ್ತಿದೆ.
ಇದರೊಂದಿಗೆ ವಿವಿಧ ಸಂಘ - ಸಂಸ್ಥೆಗಳ ವಾರ್ಷಿಕ ಮಹಾಸಭೆಗಳು, ಇವಕ್ಕೂ ಆಡಳಿತ ಮಂಡಳಿಯ ರಚನೆಯಂತಹ ಪ್ರಕ್ರಿಯೆಗಳು ಕೂಡ ಮುಂದುವರಿಯುತ್ತಿವೆ. ಇದರ ಬೆನ್ನಲ್ಲೇ ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿ ನಗರಸಭೆಗೂ ಚುನಾವಣೆ ಘೋಷಣೆಯಾಗಲಿದ್ದು, ಇದರೊಟ್ಟಿಗೆ ಲೋಕಸಭಾ ಚುನಾವಣೆಯೂ ಎದುರುಗೊಳ್ಳಲಿದೆ.
ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನೇರವಾಗಿ ರಾಜಕೀಯ ಲೇಪನವಿಲ್ಲದಿದ್ದರೂ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವದು ಮಾತ್ರ ರಾಜಕೀಯ ಪ್ರೇರಿತವಾದ ಚುನಾವಣೆಯೇ ಆಗಿದೆ. ಈ ಸಂಸ್ಥೆಗಳ ರಾಜಕೀಯ ಒಂದು ರೀತಿಯದ್ದಾದರೆ, ನೇರವಾಗಿ ಪಕ್ಷ ಆಧಾರಿತವಾಗಿ ಚುನಾವಣೆ ನಡೆಯುತ್ತಿರುವ ಮೂರು ಪಟ್ಟಣ ಪಂಚಾಯಿತಿಗಳಾದ ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆಗಳಲ್ಲಿ ಈಗಾಗಲೇ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರ್ಯಾರು ಎಂಬದು ಬಹಿರಂಗವಾಗಿದ್ದು, ಜಿದ್ದಾಜಿದ್ದಿನ ಸ್ಪರ್ಧೆಗಳು, ಮತಪ್ರಚಾರದ ಭರಾಟೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿವೆ.
ಜಿಲ್ಲೆಯಲ್ಲಿ ಅವಧಿ ಪೂರ್ಣಗೊಂಡ ಒಟ್ಟು 100 ಸಹಕಾರ ಸಂಸ್ಥೆಗಳಿಗೆ ಈ ಹಿಂದೆಯೇ ಚುನಾವಣೆ ಘೋಷಣೆಯಾಗಿತ್ತು. ಇದರೊಂದಿಗೆ ಮೂರು ಪಟ್ಟಣ ಪಂಚಾಯಿತಿಗಳ ಚುನಾವಣೆಯೂ ಮುಗಿದಿರಬೇಕಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸನ್ನಿವೇಶದಿಂದಾಗಿ ಸುಮಾರು 42 ಸಹಕಾರ ಸಂಸ್ಥೆಗಳ ಚುನಾವಣೆ ಹಾಗೂ ಮೂರು ಪಟ್ಟಣ ಪಂಚಾಯಿತಿಗಳಿಗೆ ನಿಗದಿಗೊಂಡಿದ್ದ ಚುನಾವಣೆ ಮುಂದೂಡಲ್ಪಟ್ಟಿತ್ತು. ಈ ವೇಳೆಗೆ 58 ಸಹಕಾರ ಸಂಸ್ಥೆಗಳ ಚುನಾವಣೆಗಳು ಪೂರ್ಣಗೊಂಡಿದ್ದು, ಹೊಸ ಆಡಳಿತ ಮಂಡಳಿ ರಚನೆಯಾಗಿತ್ತು. ಮಳೆಯ ತೀವ್ರತೆಯಿಂದಾಗಿ ಒಟ್ಟು 42 ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿತ್ತು. ಮುಂದೂಡಲ್ಪಟ್ಟ ಈ ಚುನಾವಣೆಗಳನ್ನು ಅಕ್ಟೋಬರ್ 15 ರಿಂದ 28ರ ಒಳಗೆ ನಡೆಸಬೇಕೆನ್ನುವ ಹೊಸ ಆದೇಶ ಹೊರಬಿದ್ದ ಬಳಿಕ ಇದೀಗ ದಿನಂಪ್ರತಿ ಒಂದೊಂದೆಡೆ ಈ ಚುನಾವಣೆಗಳು ಪೂರ್ಣಗೊಳ್ಳುತ್ತಿವೆ. 42 ಸಂಸ್ಥೆಗಳ ಪೈಕಿ ಈಗಾಗಲೇ 35 ಸಂಸ್ಥೆಗಳ ಚುನಾವಣೆಗಳು ಪೂರ್ಣಗೊಂಡಿದ್ದು, ಇನ್ನೂ 7 ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಅಂತಿಮಗೊಳ್ಳಬೇಕಿದೆ.
ಬಹುತೇಕ ಗ್ರಾಮಮಟ್ಟಗಳಲ್ಲಿ ಈ ಸಹಕಾರ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುವದರಿಂದ ಆಯಾ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಸಹಕಾರ ಸಂಸ್ಥೆಗಳ ಚುನಾವಣೆ ರಾಜಕೀಯ ಚಿಹ್ನೆಯಡಿ ನಡೆಯದಿದ್ದರೂ ಆಯಾಯ ಪಕ್ಷಗಳು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ನೇರವಾಗಿ ಕಣಕ್ಕಿಳಿಸುತ್ತಿರುವದರಿಂದ ಇದು ಒಂದು ರೀತಿಯಲ್ಲಿ ರಾಜಕೀಯ ಪ್ರತಿಷ್ಠೆಯಾಗಿಯೂ ಮಾರ್ಪಟ್ಟಿದೆ.
ಇನ್ನು ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು ಚುನಾವಣೆ ನಿಗದಿಗೊಂಡಿದ್ದು, ಈ ವ್ಯಾಪ್ತಿಗಳಲ್ಲಿನ ಮತ ಸಮರ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳು ಮಾತ್ರವಲ್ಲದೆ, ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯಾಗಿರುವದರಿಂದ ಜಿಲ್ಲೆಯಲ್ಲಿ ರಾಜಕೀಯ ರಂಗೇರುತ್ತಿದೆ. ಮಡಿಕೇರಿ ನಗರಸಭೆಗೆ ಸಂಬಂಧಿಸಿದಂತೆಯೂ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಸ್ಪರ್ಧಾಸಕ್ತರು ಟಿಕೆಟ್ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಒಳಗಿಂದೊಳಗೆ ಕಸರತ್ತು ಆರಂಭಿಸುತ್ತಿದ್ದಾರೆ.
ಈ ಎಲ್ಲಾ ಚುನಾವಣೆಗಳ ಫಲಿತಾಂಶ ಒಂದು ರೀತಿಯಲ್ಲಿ ಮುಂಬರಲಿರುವ ಲೋಕಸಭಾ ಚುನಾವಣೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಗಳಿರುವದರಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.