ಸೋಮವಾರಪೇಟೆ, ಅ.23: ಸಾಲಮನ್ನಾ ಸೇರಿದಂತೆ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಬೆಳೆಗಾರರು ಮತ್ತು ಜನಪ್ರತಿನಿಧಿಗಳ ಸಭೆ-ಸಂವಾದ ಕಾರ್ಯಕ್ರಮ ತಾ.25ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಆಯೋಜಿ ಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸೋಮವಾರ ಪೇಟೆಯ ಒಕ್ಕಲಿಗ ಸಮುದಾಯ ಭವನದಲ್ಲಿರುವ ಶ್ರೀಗಂಧ ಕನ್ವೆನ್‍ಷನ್ ಹಾಲ್‍ನಲ್ಲಿ ಬೆಳೆಗಾರರು ಮತ್ತು ಜನಪ್ರತಿನಿಧಿಗಳ ಸಭೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಸದರು, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಸಂವಾದ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಕೃತಿ ವಿಕೋಪದಿಂದ ಭೂಹಾನಿ, ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದು, ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ. ಸಂತ್ರಸ್ತ ಬೆಳೆಗಾರರಿಗೆ ಆಗಿರುವ ನಷ್ಟದ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಅದಕ್ಕೆ ಪರಿಹಾರ, ಸಾಲಮನ್ನಾ, ಕೊಡಗು ಪುನಃಶ್ಚೇತನ ಪ್ರಾಧಿಕಾರ ನಿಧಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಮಹಾಮಳೆಯಿಂದ ತೀವ್ರ ಹಾನಿಗೀಡಾದ ಪ್ರದೇಶಗಳಿಗೆ ವಿಶೇಷ ಅನುದಾನ ಘೋಷಣೆ, ಬಡ್ಡಿರಹಿತ ಸಾಲ ವಿತರಿಸಲು ಒತ್ತಾಯ, ಬೆಂಬಲ ಬೆಲೆ, ತೋಟಕ್ಕೆ ಸಂಬಂಧಿಸಿದ ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ತೆರಿಗೆ ರಹಿತವಾಗಿ ಬೆಳೆಗಾರರಿಗೆ ವಿತರಿಸಬೇಕು. ರಾಸಾಯನಿಕ ಪ್ರಯೋಗಾಲಯ ಸ್ಥಾಪಿಸಬೇಕು. ಕಾಫಿಗೆ ಕನಿಷ್ಟ ಮಾರಾಟ ಬೆಲೆ ನಿಗದಿ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನಪ್ರತಿನಿಧಿಗಳ ಮೂಲಕ ಅಹವಾಲು ಸಲ್ಲಿಸಲಾಗುವದು ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರು ಭಾಗವಹಿಸಿ, ತಮ್ಮ ಬೇಡಿಕೆಗಳನ್ನು ಜನಪ್ರತಿನಿಧಿಗಳ ಎದುರು ಮಂಡಿಸಬಹುದು ಎಂದು ಮೋಹನ್ ಬೋಪಣ್ಣ ಹೇಳಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರು ಗಳಾದ ಬಿ.ಎಂ.ಲವ, ಕೆ.ಪಿ. ಬಸಪ್ಪ, ಕಾರ್ಯದರ್ಶಿ ಎಸ್.ಸಿ.ಪ್ರಕಾಶ್, ಖಜಾಂಚಿ ಎನ್.ಎನ್.ರಮೇಶ್ ಇದ್ದರು.