ಸೋಮವಾರಪೇಟೆ, ಅ. 23: ಪಟ್ಟಣ ಪಂಚಾಯಿತಿ ವತಿಯಿಂದ ಹೊಸ ಬಡಾವಣೆಯ ಅಶೋಕ ನಗರದಲ್ಲಿ ಬಡವರಿಗಾಗಿ ನೀಡಲಾದ ನಿವೇಶನಗಳು ಉಳ್ಳವರ ಪಾಲಾಗಿದ್ದು, ನೈಜ ಬಡವರಿಗೆ ವಂಚನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಬಡಾವಣೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ನಿವೇಶನ ರಹಿತ ಹೋರಾಟಗಾರರ ಸಮಿತಿ ಅಧ್ಯಕ್ಷ ಹೆಚ್.ಎ. ನಾಗರಾಜ್ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣ ವ್ಯಾಪ್ತಿಯ ಬಡವರಿಗೆ ನೀಡಲಾದ ನಿವೇಶನಗಳಲ್ಲಿ ರೂ. 3 ಲಕ್ಷ ಮಿತಿಯೊಳಗೆ ಮನೆ ನಿರ್ಮಿಸಬೇಕೆಂದು ರಾಜ್ಯ ಸರ್ಕಾರದ ಆದೇಶವಿದ್ದರೂ, ಬಹುತೇಕ ಮಂದಿ ರೂ. 30 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಐಷಾರಾಮಿ ಮನೆಗಳನ್ನು ನಿರ್ಮಿಸಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಇನ್ನು 100ಕ್ಕೂ ಅಧಿಕ ಬಡವರಿಗೆ ನಿವೇಶನವಿಲ್ಲದೆ ಪರದಾಡುತ್ತಿದ್ದರೂ ಅಂತಹವರನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು.
2014ರಲ್ಲಿ ಅಂದಿನ ವಸತಿ ಸಚಿವರಾಗಿದ್ದ ಅಂಬರೀಶ್ ಅವರು ರೂ.3ಲಕ್ಷಕ್ಕಿಂತ ಅಧಿಕ ಮೊತ್ತದಲ್ಲಿ ಮನೆಗಳನ್ನು ನಿರ್ಮಿಸಿದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವದು ಎಂದು ಹೇಳಿಕೆ ನೀಡಿದ್ದರು. ಅಲ್ಲದೇ 2012ರಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರೂ ಕೂಡ ಇದೇ ಹೇಳಿಕೆಯನ್ನು ನೀಡಿದ್ದರು. ಆದರೆ ಈ ಹಿಂದಿನ ಆಡಳಿತ ಮಂಡಳಿಯ ಸದಸ್ಯರುಗಳಿಗೂ ಇದರ ಅರಿವಿದ್ದು, ಜಾಣಮೌನ ವಹಿಸಿದ್ದಾರೆ. ಶಾಸಕರು ಐಷಾರಾಮಿ ಮನೆಗಳನ್ನು ನಿರ್ಮಿಸಿರುವ ಫಲಾನುಭವಿಗಳನ್ನು ಖುಲ್ಲಾಗೊಳಿಸುವ ಬದಲು ಅಂತಹವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿರುವದು ದುರಂತ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ನಿವೇಶನ ನೀಡುವ ಸಂದರ್ಭ ಯಾವದೇ ವಿರೋಧ ವ್ಯಕ್ತಪಡಿಸದೇ, ಇದೀಗ ತಮ್ಮ ಪ್ರಣಾಳಿಕೆಯಲ್ಲಿ ನಿವೇಶನಗಳು ಉಳ್ಳವರ ಪಾಲಾಗಿದೆ ಎಂದು ಪ್ರಚಾರ ಮಾಡುತ್ತಿರುವದು ನಗೆಪಾಟಲಿನ ವಿಷಯ ಎಂದು ಟೀಕಿಸಿದರು. ಮುಂದಿನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ತಕ್ಷಣ ಪರಿಶೀಲನೆ ನಡೆಸಿ ಐಷಾರಾಮಿ ಮನೆಗಳನ್ನು ನಿರ್ಮಿಸಿರುವ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅಂತಹವರಿಂದ ನಿವೇಶನಗಳನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹಿರಿಯ ವಕೀಲ ಎ.ಕೆ. ಸುಬ್ಬಯ್ಯನವರ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಮುಖರಾದ ರಾಜಪ್ಪ, ನಿವೇಶನ ರಹಿತ ಹೋರಾಟ ಸಮಿತಿ ಸದಸ್ಯರಾದ ನವೀನ್, ಶೇಷಪ್ಪ, ನಿವೇಶನ ರಹಿತರಾದ ಚನ್ನಪ್ಪ, ಸಿದ್ದೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ಇದ್ದರು.