ಸುಂಟಿಕೊಪ್ಪ, ಅ. 25: ಸರಕಾರ ಜನಸಾಮಾನ್ಯರಿಗೆ ಉಪಕಾರವಿದ್ದ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ರಾಜ್ಯದ ಗ್ರಾಮೀಣ ಭಾಗದ ಜನತೆಯು ಶುದ್ಧ ಕುಡಿಯುವ ನೀರು ಕಡಿಮೆ ದರದಲ್ಲಿ ಸಿಗುವಂತಾಬೇಕೆಂದು ರಾಜ್ಯ ಸರಕಾರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ಧಾರಿಯಿಂದ ಈ ಯೋಜನೆಗೆ ಎಳ್ಳು ನೀರು ಬಿಡುವಂತಾಗಿದೆ.

ಸುಂಟಿಕೊಪ್ಪದ ನಾಡ ಕಚೇರಿಯಲ್ಲಿ ಒತ್ತಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಕಾರ್ಡು ಪದ್ಧತಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರು ನೀರನ್ನು ಪಡೆದುಕೊಳ್ಳುತ್ತಿದ್ದರು. ಇದೀಗ 2 ತಿಂಗಳಿನಿಂದ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಲಭಿಸದಾಗಿದೆ. ನೀರು ಘಟಕದ ಪೈಪ್ ತುಂಡಾಗಿದ್ದು, ಮೀಟರ್ ಬೋರ್ಡ್ ಸುಟ್ಟು ಹೋಗಿದೆ. ಜನರು ಗ್ಲಾಸ್ ಹಿಡಿದುಕೊಂಡು ನೀರಿಗಾಗಿ ಕಾರ್ಡು ಬಳಸಿದರೆ ನೀರು ಸಿಗದೆ ಹಿಡಿಶಾಪ ಹಾಕಿ ಹಿಂತೆರಳುವಂತಾಗಿದೆ.

ದಿನದ 24 ಗಂಟೆಯೂ ನೀರು ದೊರೆಯಬೇಕಿದ್ದ ಘಟಕವು ಸ್ಥಗಿತಗೊಂಡಿದ್ದು, ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪೈಪ್ ಹಾನಿಗೊಂಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ಗ್ರಾಹಕರು ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿಯವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಅಧಿಕಾರಿಗಳಿಗೆ ವಸ್ತುಸ್ಥಿತಿ ವಿವರಿಸಿ ಕಳೆದ 2 ತಿಂಗಳಿನಿಂದ ದೂರವಾಣಿ ಕರೆ ಮಾಡಿದ್ದರೂ, ಯಾವದೇ ಪ್ರಯೋಜನವಾಗಿಲ್ಲ. ಇದರ ಮೀಟರ್ ಯಂತ್ರವು ಹೈದಾರಬಾದ್‍ನಿಂದ ಬರಬೇಕಿದೆ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಜಿಲ್ಲಾ ಪಂಚಾಯಿತಿಯವರಿಗೆ ಅರ್ಜಿ ಸಲ್ಲಿಸಿದರೂ ಸೂಕ್ತ ಸ್ಪಂದನ ಸಿಗಲಿಲ್ಲ.