ವೀರಾಜಪೇಟೆ, ಅ. 25: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಮೆಮೊಟ್ಟೆಯಲ್ಲಿರುವ ಪಂಚಾಯಿತಿಗೆ ಸೇರಿದ ಸರ್ಕಾರಿ ಜಾಗವನ್ನು ಅರಣ್ಯ ಇಲಾಖೆ ಅತಿ ಕ್ರಮಿಸುವದನ್ನು ವಿರೋಧಿಸುತ್ತೇವೆ. ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ವಿರೋಧದ ನಡುವೆಯು ಅರಣ್ಯ ಇಲಾಖೆ ಅತಿ ಕ್ರಮಿಸಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸರ್ವೆ ಸಂಖ್ಯೆ 350/1 ರಲ್ಲಿ ಅಂದಾಜು 10 ಎಕರೆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಕಳೆದ ಮೂರು ದಶಕಗಳ ಹಿಂದೆಯೇ ಪಂಚಾಯಿತಿ ಕಾಯ್ದಿರಿಸಿದೆ. ಈ ಪೈಸಾರಿ ಜಾಗ ಪಂಚಾಯಿತಿ ಹಾಗೂ ಗ್ರಾಮಸ್ಥರಿಗೆ ಸದುಪಯೋಗವಾಗಲಿದೆ. ಈ ಜಾಗದದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಿಬ್ಬಂದಿಗಳಿಗೆ ವಸತಿ ಕಟ್ಟಲು ಯೋಜನೆಯನ್ನು ರೂಪಿಸಲಾಗಿದೆ. ಇಲಾಖೆ ಈಗಾಗಲೇ ಜಾಗದ ಸರ್ವೆ ಮಾಡಿ ಜಾಗ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸಿರುವದು ಪಂಚಾಯಿತಿಯ ಗಮನಕ್ಕೆ ಬಂದಿದೆ. ಜಾಗದ ಸರ್ವೆ ಕಾರ್ಯ ಪಂಚಾಯಿತಿಗೆ ಗೊತ್ತಿಲ್ಲದಂತೆ ನಡೆದಿದೆ. ಈ ಹಿಂದೆ ಇದೆ ಜಾಗದಲ್ಲಿ 141 ನಿರಾಶ್ರಿತ ಕುಟುಂಬಗಳಿಗೆ ನಿವೇಶನ ನೀಡಲು ಗ್ರಾಮ ಪಂಚಾಯಿತಿಯಿಂದ ಶಿಫಾರಸು ಮಾಡಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ ಮೇರೆಗೆ ಕಡತಗಳು ಸರ್ವೆ ಇಲಾಖೆಯ ಪರಿಶೀಲನೆ ವರದಿಗಾಗಿ ಕಾಯುತ್ತಿದೆ. ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ವಸತಿ ಕಟ್ಟಲು ಗ್ರಾಮಸ್ಥರ ಆಕ್ಷೇಪಣೆ ಇಲ್ಲ. ಅರಣ್ಯ ಇಲಾಖೆಗೆ ಸಾಕಷ್ಟು ಜಾಗವಿದೆ. ಆ ಜಾಗದಲ್ಲಿ ವಸತಿ ಗೃಹ ಕಟ್ಟಿಕೊಳ್ಳಲಿ. ಗ್ರಾಮ ಪಂಚಾಯಿತಿಯ ಸರಹದ್ದು ಮುಗಿದ ಮೇಲೆ ಇರುವದೆಲ್ಲವು ಅರಣ್ಯ ಜಾಗವೇ ಆಗಿರುವದರಿಂದ ಅರಣ್ಯ ಜಾಗದ ಯಾವದೇ ಮೂಲೆಯ ಲ್ಲಾದರೂ ವಸತಿ ಗೃಹ ನಿರ್ಮಾಣ ವಾಗಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪಾಲಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಕಾರ್ಯಪ್ಪ, ಗ್ರಾಮಸ್ಥರಾದ ಚೋಟು ಬಿದ್ದಪ್ಪ, ಅರ್ಜುನ್ ತಿಮ್ಮಯ್ಯ, ಸಿ.ಎಂ. ನಾಣಯ್ಯ ಕೆ.ಪಿ. ಮುತ್ತಪ್ಪ ಹಾಗೂ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.