ಮಡಿಕೇರಿ, ಅ. 24: ಕರ್ನಾಟಕ ಬೆಳೆಗಾರರ ಒಕ್ಕೂಟದ ಸಹಯೋಗದೊಂದಿಗೆ ಅಖಿಲ ಭಾರತ ಕಿಸಾನ್ ಸಭಾದ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ್ದ ಕಾಫಿ ಬೆಳೆಗಾರರ ಅಖಿಲ ಭಾರತ ಸಮಾವೇಶ ಬೆಂಗಳೂರಿನ ಎಸ್.ಸಿ.ಎಂ. ಹೌಸ್‍ನಲ್ಲಿ ನಡೆಯಿತು.

ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಮತ್ತು ಕೆ.ಜಿ.ಎಫ್. ಸಂಘಟನೆಯಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭಾ ಕಲಾಪಗಳನ್ನು ಕೆ.ಜಿ.ಎಫ್.ನ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್, ಎ.ಐ.ಕೆ.ಎಸ್.ನ ಬಿಜು ಕೃಷ್ಣನ್, ತಮಿಳುನಾಡಿನ ಸೇತುಲಿಂಗರಾಮನ್ ಇವರನ್ನೊಳ ಗೊಂಡ ಅಧ್ಯಕ್ಷ ಮಂಡಳಿ ನಡೆಸಿಕೊಟ್ಟಿತು.

ಕಿಸಾನ್ ಸಭಾದ ಕಾರ್ಯದರ್ಶಿ ಹನನ್ ಮುಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಾಫಿ ರಂಗದಲ್ಲಿ ಬೆಳೆಗಾರರು ಎದುರಿಸುತ್ತಿ ರುವ ಸಮಸ್ಯೆಗಳ ಬಗ್ಗೆ ವಿವರಿಸಿ ಬೆಳೆಗಾರರು ಸಂಘಟಿತರಾಗಬೇಕಾದ ಅಗತ್ಯತೆಯನ್ನು ವಿವರಿಸಿದರು.

ಕಿಸಾನ್ ಸಭಾದ ಆರ್ಥಿಕ ಕಾರ್ಯದರ್ಶಿ ಪಿ. ಕೃಷ್ಣಪ್ರಸಾದ್ ವರದಿ ಮಂಡಿಸಿದರು. ಮೂರೂ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಕೊನೆಯಲ್ಲಿ 11 ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಎ.ಐ.ಕೆ.ಎಸ್.ನ ಪಿ. ಕೃಷ್ಣಪ್ರಸಾದ್ ಸಂಚಾಲಕರಾಗಿ ಆಯ್ಕೆಯಾದರು.

ಈ ಸಂಚಾಲನಾ ಸಮಿತಿ ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ರೂಪಿಸಿ ಅವುಗಳ ಸಾಧನೆಗಾಗಿ ಕಾರ್ಯಕ್ರಮಗಳನ್ನು ರೂಪಿಸಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ.