ಸೋಮವಾರಪೇಟೆ, ಅ. 25: ಇಲ್ಲಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನಲ್ಲಿ ವಿಜಯಾ ಬ್ಯಾಂಕ್ ನೆರವಿನಿಂದ ನೂತನವಾಗಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್ ಉದ್ಘಾಟಿಸಿದರು.

ಕಾಲೇಜಿನಲ್ಲಿ ನೂತನ ಶೌಚಾಲಯವನ್ನು ನಿರ್ಮಿಸಲು ವಿಜಯಾ ಬ್ಯಾಂಕ್‍ನಿಂದ ರೂ. 2 ಲಕ್ಷ ಸಹಾಯಧನ ನೀಡಲಾಗಿದ್ದು, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಕಾಲೇಜು ನಿಧಿಯಿಂದಲೂ ಹಣ ವಿನಿಯೋಗಿಸಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ.

ಈ ಸಂದರ್ಭ ಮಾತನಾಡಿದ ಚಂದ್ರಶೇಖರ್, ಬ್ಯಾಂಕ್ ಸ್ಥಾಪನೆಯಾಗಿ 88 ವರ್ಷಗಳು ಪೂರ್ಣಗೊಂಡಿದ್ದು, ಹಣಕಾಸಿನ ವ್ಯವಹಾರಗಳೊಂದಿಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನೂ ಕೈಗೊಂಡಿದ್ದೇವೆ. ಸೋಮವಾರಪೇಟೆ ಶಾಖೆಯಿಂದ ಬಡ ವಿದ್ಯಾರ್ಥಿಯನ್ನು ದತ್ತು ಪಡೆಯುವ ಮೂಲಕ ಶೈಕ್ಷಣಿಕ ಜವಾಬ್ದಾರಿ ಹೊತ್ತಿದ್ದೇವೆ. ಬ್ಯಾಂಕ್‍ನ ಸಾಮಾಜಿಕ ಅಭಿವೃದ್ಧಿ ಯೋಜನೆಯಡಿ ಕಾಲೇಜು ಶೌಚಾಲಯಕ್ಕೆ ಆರ್ಥಿಕ ಸಹಾಯಧನ ಒದಗಿಸಲಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಟೆನ್ನಿಕುರಿಯನ್ ಮಾತನಾಡಿ, ಸುಮಾರು ರೂ. 7 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಶೌಚಾಲಯದ ಶುಚಿತ್ವದೊಂದಿಗೆ ದೇಹಾರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಕಾಲೇಜು ವ್ಯವಸ್ಥಾಪಕ ಎಂ. ರಾಯಪ್ಪ, ಕೊಡಗು ಜಿಲ್ಲಾ ಡೀನ್ ಮದಲೈ ಮುತ್ತು, ಧರ್ಮ ಕೇಂದ್ರ ಪರಿಪಾಲನಾ ಸಮಿತಿಯ ಲಾರೆನ್ಸ್, ರೋಶನ್, ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್, ಮಮತ, ವಿಜಯಾ ಬ್ಯಾಂಕ್ ಸಿಬ್ಬಂದಿಗಳಾದ ಶಶಾಂಕ್, ಮೃತ್ಯುಂಜಯ ಉಪಸ್ಥಿತರಿದ್ದರು.

ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸಿದ ವಿಜಯಾ ಬ್ಯಾಂಕ್‍ನ ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು.