ಶನಿವಾರಸಂತೆ, ಅ. 24: ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ರಾತ್ರಿ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿರುವಾಗ ಅಕ್ರಮವಾಗಿ ರಹದಾರಿ ಇಲ್ಲದೆ ಟ್ರ್ಯಾಕ್ಟರ್ (ಕೆಎ-12, ಟಿ-7457)ರಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿ ಟ್ರ್ಯಾಕ್ಟರ್ ಸಹಿತ ಮರಳನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಡಬನಹಳ್ಳಿಯಿಂದ ಮಾಲಂಬಿ ಕಡೆಗೆ ಹೋಗುವ ರಸ್ತೆಯಲ್ಲಿ ಗಾರೆಕಟ್ಟೆ ಸೇತುವೆ ಬಳಿ ಬಡಬನಹಳ್ಳಿ ಗ್ರಾಮದ ಚಾಲಕ ಬಿ.ಎ. ನಂದೀಶ್ ಇತರರು ಟ್ರ್ಯಾಕ್ಟರ್‍ಗೆ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದಾಗ, ಪೊಲೀಸರನ್ನು ಕಂಡು ಓಡಿ ಪರಾರಿಯಾದರು. ಪೊಲೀಸರು ಮರಳು ಸಹಿತ ಟ್ರ್ಯಾಕ್ಟರ್‍ನ್ನು ಶನಿವಾರಸಂತೆ ಪೊಲೀಸ್ ಠಾಣೆಗೆ ಸಾಗಿಸಿ ಪ್ರಕರಣ ದಾಖಲಿಸಿರುತ್ತಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಸಿಬ್ಬಂದಿಗಳಾದ ಎನ್.ಆರ್. ಹರೀಶ್, ಸಂತೋಷ್ ಪಾಲ್ಗೊಂಡಿದ್ದರು.