ಸೋಮವಾರಪೇಟೆ, ಅ. 24: ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಹೊಂದಲು ಸಾಧ್ಯ ಎಂದು ತಾಲೂಕು ಒಕ್ಕಲಿಗರ ಸಂಘದ ಸದಸ್ಯ ಹೆಚ್.ಆರ್. ಸುರೇಶ್ ಅಭಿಪ್ರಾಯಿಸಿದರು.

ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಟೆನ್ ಸೆಂಕೆಡ್ಸ್ ತರಬೇತಿ ಸಂಸ್ಥೆಯೊಂದಿಗೆ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಿನೇದಿನೇ ಬದಲಾವಣೆ ಹಾದಿಯಲ್ಲಿ ಸಾಗುತ್ತಿರುವ ಶಿಕ್ಷಣಕ್ಕೆ ವಿದ್ಯಾರ್ಥಿಗಳೂ ಹೊಂದಿಕೊಳ್ಳಬೇಕು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟವಾಗಿದ್ದು, ಶಿಸ್ತು ಮತ್ತು ಏಕಾಗ್ರತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನೇಕ ಸವಲತ್ತುಗಳಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ವಾರಗಳ ಕಾಲ ವಿಶೇಷ ಉಪನ್ಯಾಸ, ಯೋಗ ಶಿಕ್ಷಣ, ವ್ಯಕ್ತಿತ್ವ ವಿಕಸನ, ವಾರ್ಷಿಕ ಪರೀಕ್ಷೆಯ ತಯಾರಿ ಬಗ್ಗೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಶಶಿಕಾಂತ್ ಕುರೋಡಿ ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎಸ್. ಶರಣ್, ಕನ್ನಡ ಉಪನ್ಯಾಸಕ ಕುಮಾರ್, ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಮನು ಎನ್. ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.