ಸೋಮವಾರಪೇಟೆ, ಅ. 25: ಅವಕಾಶವಾದಿ ರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಇದರ ಹೊರತಾಗಿಯೂ ಈ ಹಿಂದಿನ ಅಭಿವೃದ್ಧಿ ಕಾರ್ಯಗಳಿಂದಾಗಿ 11 ವಾರ್ಡ್‍ಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಬಗೆಗಿನ ಸ್ಪಷ್ಟ ಚಿಂತನೆ ಇಲ್ಲದೆ ಎರಡೂ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಮಾತ್ರ ಮೈತ್ರಿ ಮಾಡಿಕೊಂಡಿವೆ. ಕಳೆದ ಅವಧಿಗಳಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಶಾಸಕ ಅಪ್ಪಚ್ಚು ರಂಜನ್ ಅವರ ಜನಪರ ಆಡಳಿತದಿಂದ ಈ ಬಾರಿಯೂ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಡಿ ವಿದ್ಯುತ್ ಸಮಸ್ಯೆ ನೀಗಿಸಲು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ರೂ. 5.9 ಕೋಟಿ ಅನುದಾನ ನೀಡಿದೆ. ವಿದ್ಯುತ್ ಕಂಬ, ತಂತಿ, ಟ್ರಾನ್ಸ್‍ಫಾರ್ಮರ್, ಹೊಸ ಸಂಪರ್ಕ ನೀಡುವ ಕಾರ್ಯ ತಕ್ಷಣ ಪ್ರಾರಂಭವಾಗಲಿದೆ. ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ವಿದ್ಯುತ್ ಕಲ್ಪಿಸುವ ಪ್ರಯತ್ನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಡೆಯಲಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಗೊಬ್ಬರದ ಕೃತಕ ಅಭಾವ ತಪ್ಪಿದ್ದು, ಬೆಲೆಯೂ ಇಳಿಕೆಯಾಗಿದೆ. ಸಮಯಕ್ಕೆ ಸರಿಯಾಗಿ ರೈತರಿಗೆ ಗೊಬ್ಬರ ಲಭಿಸುತ್ತಿದೆ. ಕಾಫಿ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಸದ್ಯದಲ್ಲೇ ಕೇಂದ್ರ ಸಚಿವ ಸುರೇಶ್ ಪ್ರಭು ಅವರ ಬಳಿ ನಿಯೋಗ ತೆರಳಲಾಗುವದು ಎಂದು ಸಂಸದ ತಿಳಿಸಿದರು.

ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಸಂದರ್ಭ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ನಿಧಿಯಿಂದ ರೂ. 30 ಕೋಟಿ ನೀಡಲಾಗಿದೆ. ಇದರೊಂದಿಗೆ ಎಸ್‍ಡಿಆರ್‍ಎಫ್‍ಗೆ ಕೇಂದ್ರ ಸರ್ಕಾರ ಶೇ.75ರಷ್ಟು ಅನುದಾನ ನೀಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಂದ ದೇಣಿಗೆಯನ್ನು ಸಂಪೂರ್ಣ ವಾಗಿ ಕೊಡಗಿಗೆ ವಿನಿಯೋಗಿಸಬೇಕು. ಇದರೊಂದಿಗೆ ತಕ್ಷಣವೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಬೇಕೆಂದು ತಾನು ರಾಜ್ಯ ಸರ್ಕಾರವನ್ನು ಒತ್ತಾಯಿಸುವದಾಗಿ ಪ್ರತಾಪ್ ಸಿಂಹ ಹೇಳಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಪಕ್ಷದ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಜಿಲ್ಲಾ ಸಮಿತಿಯ ಉಷಾ ತೇಜಸ್ವಿ ಅವರುಗಳು ಉಪಸ್ಥಿತರಿದ್ದರು.