ಕುಶಾಲನಗರ, ಅ. 25: ಜೀವನದಿ ಕಾವೇರಿ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ 8ನೇ ವರ್ಷದ ರಥಯಾತ್ರೆ ಇಂದಿನಿಂದ (26 ರಿಂದ) ಚಾಲನೆಗೊಳ್ಳಲಿದೆ. ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಆಶ್ರಯದಲ್ಲಿ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಸಾಗಲಿದ್ದು, ಬೆಳಿಗ್ಗೆ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವದರೊಂದಿಗೆ ಭಾಗಮಂಡಲ- ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಉಪಸ್ಥಿತಿಯೊಂದಿಗೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ. ಬಳಿಕ ಸಾಧುಸಂತರ ತಂಡದ ಪ್ರಮುಖರು ಪ್ರಕೃತಿ ವಿಕೋಪಕ್ಕೆ ಒಳಗಾದ ಕಾಲೂರು ಗ್ರಾಮಕ್ಕೆ ಭೇಟಿ ನೀಡಿ; ಅಲ್ಲಿನ ಜನರೊಂದಿಗೆ ಮಾತನಾಡಿ ಸಾಂತ್ವನ ಹೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಮಿಳುನಾಡಿನ ಸಂತರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ದಕ್ಷಿಣ ಭಾರತದ ಸಾಧುಸಂತರು ಮತ್ತು ಆಂದೋಲನದ ಕಾರ್ಯಕರ್ತರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು 20 ದಿನಗಳ ಕಾಲ ಯಾತ್ರೆ ನಡೆಯಲಿದೆ. ಕೊಡಗು ಜಿಲ್ಲೆಯ ತಲಕಾವೇರಿಯಿಂದ ಹೊರಟು ಕಾವೇರಿ ನದಿ ತಟದ ಕ್ಷೇತ್ರಗಳ ಮೂಲಕ ಕುಶಾಲನಗರ ಮಾರ್ಗವಾಗಿ ಜಿಲ್ಲೆಯಿಂದ ರಾಮನಾಥಪುರ ಮೂಲಕ ಸಾಗಲಿದೆ.

ನವೆಂಬರ್ 15 ರಂದು ಕಾವೇರಿ ನದಿ ಸಮುದ್ರ ಸಂಗಮವಾಗುವ ತಮಿಳುನಾಡಿನ ಪೂಂಪ್‍ಹಾರ್ ಕ್ಷೇತ್ರದಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ. ತಲಕಾವೇರಿ ಕ್ಷೇತ್ರದಿಂದ ಕಳಶಗಳಲ್ಲಿ ಒಯ್ಯಲಾಗುವ ಪವಿತ್ರ ಕಾವೇರಿ ತೀರ್ಥವನ್ನು ಪೂಂಪ್‍ಹಾರ್‍ನ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುವದು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.