ಗೋಣಿಕೊಪ್ಪ ವರದಿ, ಅ. 25: ಕೇಂದ್ರ ಲೋಕಸಭಾ ಸಚಿವಾಲಯ ಗ್ರಾಮೀಣಾಭಿವೃದ್ಧಿ ಸಂಸದೀಯ ಸ್ಥಾಯಿ ಸಚಿವಾಲಯದ ತಂಡವು ತಿತಿಮತಿ ಗ್ರಾಮ ಪಂಚಾಯ್ತಿ ಹಾಗೂ ಆಶ್ರಮ ಶಾಲೆಗೆ ಪೂರ್ವ ನಿಗದಿಯಂತೆ ಭೇಟಿ ನೀಡದೆ ತೆರಳುವ ಮೂಲಕ ನಿರಾಸೆ ಮೂಡಿಸಿತು. ಒಂದಷ್ಟು ಮಂದಿ ಹೂ ಸ್ವೀಕರಿಸಿದರು. ಇನ್ನೊಂದಿಷ್ಟು ಮಂದಿ ವಾಹನದಿಂದ ಇಳಿಯಲೇ ಇಲ್ಲ. ಇದೇನು ಎಂದು ಅರ್ಥವಾಗುವ ಮುನ್ನವೇ ವಾಹನ ಹತ್ತಿ ಸಾಗಿದರು.ಪರಿಶೀಲನೆ ಕಾರ್ಯಕ್ರಮ ಕೇವಲ ಹೂಗುಚ್ಚ ಸ್ವೀಕರಿಸಿ ಸ್ವಾಗತಕಷ್ಟೆ ಮೀಸಲಾಯಿತು. ಬರುತ್ತಾರೆ ಎಂದು ಕಾದು ಕುಳಿತ ತಿತಿಮತಿ ಗ್ರಾಮ ಪಂಚಾಯಿತಿ, ಮರೂರು ಆಶ್ರಮ ಶಾಲೆ, ಬೊಂಬುಕಾಡು ಹಾಡಿಯ ಜನರು ತಾವು ಮಾಡಿದ ಸಿದ್ಧತೆ ಎಲ್ಲವೂ ನೀರಿನಲ್ಲಿ ಹೋಮವಾ ದಂತಾಯಿತು ಎಂದು ಮೌನ ಮುರಿದರು. ತಂಡ ಆನೆಚೌಕೂರು ಗಡಿದ್ವಾರದಲ್ಲಿ ಹೂಗುಚ್ಚ ಸ್ವೀಕರಿಸಿ ಪಾಲಿಬೆಟ್ಟಕ್ಕೆ ತೆರಳಿತು. ಸೌಜನ್ಯಕ್ಕೂ ಸ್ವಾಗತ ಪೂರ್ತಿಗೊಳಿಸಲಿಲ್ಲ ಪೂರ್ವ ನಿಗದಿಯಂತೆ 20 ಸಂಸದರು ಹಾಗೂ 12 ರಾಜ್ಯಸಭಾ ಸದಸ್ಯರ ಸಂಸದೀಯ ತಂಡ ತಿತಿಮತಿ ಗ್ರಾಮ ಪಂಚಾಯಿತಿ, ಮರೂರು ಗಿರಿಜನ ಆಶ್ರಮ ಶಾಲೆ ಹಾಗೂ ಬೊಂಬುಕಾಡು ಹಾಡಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲು ನಿರ್ಧರಿ ಸಲಾಗಿತ್ತು. ಸಮಯಕ್ಕೆ ಸರಿಯಾಗಿ ಆಗಮಿಸಿದ ತಂಡವನ್ನು ತಿತಿಮತಿ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿ ವರ್ಗ ಆನೆಚೌಕೂರು ಗೇಟ್‍ನಲ್ಲಿ ಸ್ವಾಗತಿಸಿ ಕೊಂಡು ಪಂಚಾಯ್ತಿಗೆ ಕರೆ ತರಲು ತೆರಳಿದ್ದರು. ಅಲ್ಲಿಗೆ ಬಂದ ತಂಡದಿಂದ ಒಂದಿಬ್ಬರು ವಾಹನ ದಿಂದ ಇಳಿದು ಸ್ವಾಗತ ಸ್ವೀಕರಿಸಿದರು. ಉಳಿದವರು ವಾಹನದಲ್ಲಿ ಕುಳಿತರು.

(ಮೊದಲ ಪುಟದಿಂದ) ಸಿಕ್ಕಿದವರಿಗೆ ಹೂ ನೀಡಿದ ಆತಿಥೇಯರು, ವಾಹನದಿಂದ ಇಳಿಯದವರಿಗೂ ಹೂ ನೀಡಲು ಮುಂದಾದರು. ಒಂದಷ್ಟು ಮಂದಿಗೆ ಹೂ ನೀಡಿದರು. ಆದರೆ, ಯಾರು ಬಂದಿದ್ದಾರೆ, ಏನು ಎಂದು ಅರಿವಾಗುವ ಮುನ್ನವೇ ಅವರುಗಳ ವಾಹನ ಮುಂದೆ ಸಾಗಿತ್ತು. ತಂದಿದ್ದ ಹೂಗುಚ್ಚ ಕೂಡ ಬಳಕೆಯಾಗಲಿಲ್ಲ.

ಜಿ.ಪಂ. ಸದಸ್ಯೆ ಪಂಕಜ, ತಾ. ಪಂ. ಸದಸ್ಯೆ ಆಶಾಜೇಮ್ಸ್, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ರಶಿ, ಪಿಡಿಒ ಮಮತ, ಸದಸ್ಯ ಅನೂಪ್ ಸೇರಿದಂತೆ ಆಡಳಿತ ಮಂಡಳಿ ಗಡಿಯಲ್ಲಿ ಸ್ವಾಗತಕ್ಕೆ ತಯಾರಿದ್ದು ನಿರಾಸೆ ಅನುಭವಿಸಿದರು. ತಿತಿಮತಿ ವ್ಯಾಪ್ತಿಯ ಜನತೆ ಇದರಿಂದ ಬೇಸತ್ತು ಮನೆಗೆ ತೆರಳಿದರು. ಊಟ, ನೀರು ಇಲ್ಲದೆ ಮಾಡಿದ ತಯಾರಿ ವ್ಯರ್ಥವಾಯಿತು.

ಸ್ವಚ್ಛತೆ ಕಾಪಾಡಿಕೊಂಡ ತೃಪ್ತಿಯಷ್ಟೆ

ಪರಿಶೀಲನೆಗೆ ಬರುವ ಕಾರ್ಯಕ್ರಮದಂತೆ ಜಿಲ್ಲಾಡಳಿತ ಸೂಚನೆಯಂತೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಕಟ್ಟಡ, ನೀರಿನ ಟ್ಯಾಂಕ್, ಕಾಂಪೌಂಡ್‍ಗಳಿಗೆ ಸುಣ್ಣ ಬಣ್ಣ ಬಳಿದು ಸ್ವಚ್ಛಗೊಳಿಸಲಾಗಿತ್ತು. ಗೋಡೆ ಬರಹಗಳ ಮೂಲಕ ಸ್ವಚ್ಛತೆಯ ಸಂದೇಶಗಳನ್ನು ಬರೆಯಲಾಗಿತ್ತು.

ಬೊಂಬುಕಾಡು ಹಾಡಿಯ ರಸ್ತೆಗೆ 1.5 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ನಡೆಸಲಾಗಿತ್ತು. ಇಲ್ಲಿನ ಸ್ಮಶಾನಕ್ಕೆ 1 ಲಕ್ಷ ರೂ. ಅನುದಾನದ ಮೂಲಕ ಕಾಡು ಕಡಿದು, ಗೇಟ್‍ಗೆ ಬಣ್ಣ ಹಚ್ಚಿದ್ದರು. ಮರೂರು ಗಿರಿಜನ ಶಾಲೆಯ ಹಳೆಯ ಕಟ್ಟಡಗಳನ್ನು ಕೆಡವಿ ಉಳಿದ ಕಟ್ಟಡಗಳಿಗೆ ಬಣ್ಣ ಬಳಿದು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸುಮಾರು 1 ಲಕ್ಷ ರೂ. ಅನುದಾನದಲ್ಲಿ ಸ್ವಚ್ಛತೆ ನಡೆಸಲಾಗಿತ್ತು. ಆದರೆ. ತಂಡ ಯಾವದನ್ನೂ ವೀಕ್ಷಿಸಿಸದೆ ತೆರಳಿರುವದು ನಿರಾಸೆ ಮೂಡಿಸಿದೆ. ಕಳೆದ 15 ದಿನಗಳಿಂದ ಜಿಲ್ಲಾಡಳಿತ ತಿತಿಮತಿ ಪಂಚಾಯ್ತಿಗೆ ಭೇಟಿ ನೀಡಿ ಸಿದ್ದತೆ ಮಾಡಿಕೊಳ್ಳುತ್ತಿತ್ತು. ತಿತಿಮತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಹಗಲು, ರಾತ್ರಿ ಎನ್ನದೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು.

ಮರೂರು ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಕೋರಲು ಶಾಲೆ ಗೇಟ್‍ಗೆ ಹಸಿರು ತೋರಣ ಕಟ್ಟಿದ್ದರು. ವಿದ್ಯಾರ್ಥಿಗಳು ಒಂದಷ್ಟು ಸಾಂಸ್ಕøತಿಕ ಕಾರ್ಯಕ್ರಮ ನೀಡಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇತ್ತ ಹಾಡಿಯ ಜನರು ಸೇರಿ ತಂಡೋಪ ತಂಡವಾಗಿ ಕಾದು ಕುಳಿತಿದ್ದರು. ತಿತಿಮತಿ ಪಟ್ಟಣ ಸುಣ್ಣ, ಬಣ್ಣದಿಂದ ಹಬ್ಬದ ವಾತಾವರಣ ಮೂಡಿಸಿತ್ತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರುಗಳು ಪಾಲ್ಗೊಂಡಿದ್ದರು. ಜನತೆ ಕೂಡ ಇದೇನು ಎಂದು ಅರಿಯಲು ಉತ್ಸುಕರಾಗಿದ್ದರು, ಆದರೆ, ಇದ್ಯಾವದಕ್ಕೂ ಬೆಲೆಯೇ ಸಿಗಲಿಲ್ಲ. ಗ್ರಾಮ ಪಂಚಾಯಿತಿಯ ಆಡಳಿತ ವರ್ಗ ಬೆಳಗ್ಗೆಯಿಂದಲೇ ಆಹಾರ ತೆಗೆದುಕೊಳ್ಳದೆ ಉತ್ಸಾಹದಲ್ಲಿದ್ದರು. ಎಲ್ಲದಕ್ಕೂ ತಣ್ಣೀರು ಎರಚಿದಂತಾಯಿತು.

13 ವಾಹನಗಳಲ್ಲಿ ಬಂದ ತಂಡದ ಕೆಲವರು ಹೂವಷ್ಟೇ ಸ್ವೀಕರಿಸಿ ತೆರಳಿದರು. ಆಶ್ರಮ ಶಾಲೆಗೆ ಭೇಟಿ ನೀಡಿದ್ದರೂ ಮಕ್ಕಳ ಸಿದ್ಧತೆಗೆ ಬೆಲೆ ದೊರಕುತ್ತಿತ್ತು ಎಂದು ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. - ವರದಿ : ಸುದ್ದಿಪುತ್ರ